ಶಿರಸಿ: ಶಿರಸಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ದಿ. ಶೇಷಗಿರಿರಾವ್ ನಾರಾಯಣರಾವ್ ಕೇಶವೈನ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಶುಕ್ರವಾರ ಶಿರಸಿಯ ನೆಮ್ಮದಿ ಕುಟೀರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಪ್ರೊ. ಕೆ.ಎನ್. ಹೊಸ್ಮನಿ ಉಪನ್ಯಾನ ನೀಡಿ ಶಿರಸಿ ಅರ್ಬನ್ ಬ್ಯಾಂಕ್ 117 ವರ್ಷಗಳ ಇತಿಹಾಸ ಹೊಂದಿದ ಬ್ಯಾಂಕ್ ಆಗಿದ್ದು, ಎಲ್ಲ ವ್ಯವಸ್ಥೆಗಳನ್ನು ತನ್ನ ಶಾಖೆಗಳಲ್ಲಿ ಅಳವಡಿಸಿಕೊಳ್ಳುವ ಮುಖಾಂತರ ದೇಶದ ಆರ್ಥಿಕ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ದಿ. ಕೇಶವೈನ್ ಅವರ ಕೊಡುಗೆ ಮತ್ತು ದೂರದೃಷ್ಟಿ ಈ ಬ್ಯಾಂಕ್ ಯಶಸ್ವಿಗೊಳ್ಳಲು ಕಾರಣವಾಗಿದೆ ಎಂದರು. 59 ವರ್ಷಗಳ ಕಾಲ ಕೇಶವೈನ್ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಸ್ಮರಣೀಯ ಕೆಲಸ ಮಾಡಿದ್ದನ್ನು ಇಂದಿಗೂ ಬ್ಯಾಂಕ್ ಸ್ಮರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯದೇವ ನೀಲೇಕಣಿ ಮಾತನಾಡಿ ನಮ್ಮ ಬ್ಯಾಂಕ್ ಜಿಲ್ಲೆಯ ಆರ್ಥಿಕ ಶಕ್ತಿಗೆ ಕೊಂಡಿಯಾಗಿ ಕೆಲಸಮಾಡಿದ್ದಲ್ಲದೇ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಡಿ ಮುನ್ನಡೆಯುತ್ತಿದೆ. ಬ್ಯಾಂಕಿನ ಎಲ್ಲಾ ನಿರ್ಧಾರವೂ ಸಹ ಒಮ್ಮತದಿಂದ ಆಗುತ್ತದೆ. ಈ ಹಿಂದೆ ಹುಬ್ಬಳ್ಳಿ ಬೆಂಗಳೂರಿನಲ್ಲಿ ಶಾಖೆ ತೆರೆದಿದ್ದೆವು. ಪ್ರಸ್ತುತ ಹಾವೇರಿ ಹಾಗೂ ಉಡುಪಿಯಲ್ಲಿ ಬ್ಯಾಂಕ್‌ನ ನೂತನ ಶಾಖೆ ತೆರೆಯಲಿದ್ದೇವೆ ಎಂದರು.
ಇನ್ನೋರ್ವ ಅತಿಥಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ ಜಿಲ್ಲಾ ಕಸಾಪದಲ್ಲಿ ಐದು ದತ್ತಿನಿಧಿಗಳು ಮಾತ್ರ ಇವೆ. ಇದು ಒಂದು ತಾಲೂಕಿನಲ್ಲಿ ಐದರಂತೆ ಹೆಚ್ಚಬೇಕಾಗಿದೆ. ಶಿರಸಿಯಲ್ಲಿ ಕಡವೆ, ಸೋಂದೆ, ಹೀಪನಳ್ಳಿ, ಅಜ್ಜೀಬಳ ಅವರ ಹೆಸರಿನಲ್ಲೂ ದತ್ತಿನಿಧಿ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಶಿರಸಿ ಕಸಾಪ ಮುಂದಾಗಲಿ ಎಂದರು.
ಜಿಲ್ಲಾ ಕಸಾಪ ಸಂಘಸಂಸ್ಥೆಯ ಪ್ರತಿನಿಧಿ ಡಾ. ವೆಂಕಟೇಶ ನಾಯ್ಕ ಮಾತನಾಡಿ ಸಾಹಿತ್ಯ ಪರಿಷತ್ತು ಜಿಲ್ಲೆಯ ವಿವಿಧ ಸಮುದಾಯದ ಮತ್ತು ಜಿಲ್ಲಾ ಧಾರಣ ಸಾಮರ್ಥ್ಯದ ಕುರಿತು ಸಹ ವಿಶೇಷ ಕಾರ್ಯಕ್ರಮ ಏರ್ಪಡಿಸಬೇಕೆಂದರು.
ನಿವೃತ್ತ ಪ್ರಾಚಾರ್ಯ ಡಾ. ಜಿ.ಎ. ಸೋಂದಾ ಮಾತನಾಡಿ ಸುಬ್ರಾಯ ಬಕ್ಕಳರ ಅವಧಿಯಲ್ಲಿ ಕೇಶವೈನ್ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲು ಸಾಧ್ಯವಾಯಿತು. ತಾಲೂಕಿನ ಸಾಹಿತಿಗಳನ್ನು ಒಗ್ಗೂಡಿಸಿ ಸಾಹಿತ್ಯ ಕಾರ್ಯಕ್ರಮ ರೂಪಿತವಾಗುತ್ತಿರುವುದು ಸಂತೋಷವೆಂದರು.
ಕಸಾಪ ಶಿರಸಿ ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಳೆದ ಒಂದು ವರ್ಷದಲ್ಲಿ 14 ವಿವಿಧ ಸಾಹಿತ್ಯಿಕ ಕಾರ್ಯಕ್ರಮ ಒಂದು ತಾಲೂಕಾ ಸಮ್ಮೇಳನ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮಾಡಿದ್ದೇವೆ. ಶಿರಸಿಯಲ್ಲಿ ದತ್ತಿನಿಧಿ ಕಾರ್ಯಕ್ರಮ ಹೆಚ್ಚಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕಸಾಪ ಕೋಶಾಧ್ಯಕ್ಷ ವಿ.ಆರ್. ಹೆಗಡೆ ಮತ್ತಿಘಟ್ಟ, ಸದಸ್ಯರಾದ ಆರ್.ಡಿ. ಹೆಗಡೆ ಆಲ್ಮನೆ, ವಿಮಲಾ ಭಾಗ್ವತ್, ಮಹಾದೇವ ಚಲವಾದಿ, ರಾಜೇಶ ದೇಶಭಾಗ, ಜಗದೀಶ ನಾ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶುಕ್ರವಾರ ನಿಧಿನರಾದ ಜಿಲ್ಲೆಯ ಹಿರಿಯ ಸಾಹಿತಿ ಪಂಪ ಪ್ರಶಸ್ತಿ ಪುರಸ್ಕೃತ ಜಿ.ಎಚ್. ನಾಯಕ ನಿಧನಕ್ಕೆ ಸಂತಾಪ ಸೂಚಿಸಲಾಯಿತು.