ಯಲ್ಲಾಪುರ: ನಾವು ಸದಾ ಸತ್ಸಂಗವನ್ನು ಬಯಸುತ್ತೆವೆ. ಯಕ್ಷಗಾನ ತಾಳಮದ್ದಳೆಗಳು ಅಂತಹ ಸಾತ್ವಿಕ ಚಿಂತನೆ ಮತ್ತು ಜ್ಞಾನವನ್ನು ನೀಡುತ್ತವೆ. ಈ ದಿಸೆಯಲ್ಲಿ ಅನಂತ ಹೆಗಡೆ ದಂತಳಗಿ ರಚಿಸಿದ ‘ಗಾಯತ್ರಿ ದರ್ಶನ’ವೆಂಬ ಯಕ್ಷಗಾನ ಪ್ರಸಂಗ ನೂತನ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದೆ ಎಂದು ವಿದ್ವಾನ್ ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಹೇಳಿದರು.
ಅವರು ತಾಲೂಕಿನ ಚಂದಗುಳಿಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ (ಗಂಟೆಗಣಪತಿ) ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಗಿ ರಚಿಸಿದ ಗಾಯತ್ರಿ ದರ್ಶನದ ಪ್ರಥಮ ಪ್ರಯೋಗಾರ್ಥ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಸಂಗ ರಚನೆ ಸುಲಭದ ಕೆಲಸವಲ್ಲ. ಅದಕ್ಕೆ ಅಧ್ಯಯನಶೀಲತೆ ಮತ್ತು ಅಪಾರ ಧ್ಯಾನ ಇರಬೇಕಾಗುತ್ತದೆ. ಯುವಕರಾದ ದಂತಳಗಿ ಪ್ರಾಜ್ಞರ, ವಿದ್ವಾಂಸರ ಮಾರ್ಗದರ್ಶನ, ಸಲಹೆ ಪಡೆದು ಇದನ್ನು ರಚಿಸಿದ್ದಾರೆ. ದೇವಡು ನರಸಿಂಹ ಶಾಸ್ತ್ರಿಯವರ ‘ಮಹಾ ಬ್ರಾಹ್ಮಣ’ ಕಾದಂಬರಿಯನ್ನು ಆಧರಿಸಿ ಬರೆದ ಕೃತಿ ಇದಾಗಿದೆ. ಇದು ಅನಂತ ಅವರ ಧೈರ್ಯ ಮತ್ತು ದಿಟ್ಟ ಹೆಜ್ಜೆಯಾಗಿದೆ. ಈ ಕೃತಿ ಮುಂದಿನ ದಿನಗಳಲ್ಲಿ ಸಿದ್ಧಿವಿನಾಯಕನ ಅನುಗ್ರಹದಿಂದ ಪ್ರಸಿದ್ಧಿಗಳಿಸುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಶುಭ ಕೋರಿದರು. ಪ್ರಸಂಗ ರಚನಾಕಾರ ಅನಂತ ಹೆಗಡೆ ದಂತಳಗಿ ಮಾತನಾಡಿ, ಬಹು ದಿನಗಳಿಂದ ಹಲವರ ಒತ್ತಾಯವಿತ್ತು. ಅನೇಕ ಕಡೆ ಉಪನಯನದ ಸಂದರ್ಭದಲ್ಲಿ ತಾಳಮದ್ದಲೆ ಮಾಡಲಾಗುತ್ತಿದೆ. ವಟುಗಳಿಗೆ ಸಂದೇಶ ನೀಡುವಂತಹ ತಾಳಮದ್ದಲೆ ಆಗಬೇಕೆಂಬ ಆಶಯದಿಂದ ಗಾಯತ್ರಿ ದರ್ಶನ ಬರೆಯಲು ಆರಂಭಿಸಿದೆ. ನನ್ನ ಮಡದಿ ಮತ್ತು ಮನೆಯ ಸದಸ್ಯರ ಬೆಂಬಲದೊಂದಿಗೆ ಶ್ರೇಷ್ಠ ವಿದ್ವಾಂಸ ಉಮಾಕಾಂತ ಭಟ್ಟರ ಮಾರ್ಗದರ್ಶನ ಪಡೆದು, ನನ್ನ ಗುರು ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ನಿರ್ದೇಶನದಲ್ಲಿ ಪ್ರಸಂಗ ರಚಿಸಿದೆ. ಈ ಕೃತಿ ಸಮಾಜದಲ್ಲಿ ಮನ್ನಣೆ ಪಡೆದರೆ ನನ್ನ ಶ್ರಮ ಸಾರ್ಥಕವಾಗುತ್ತದೆ ಎಂದರು. ವಿಶ್ವದರ್ಶನ ಪಿ.ಯು ಕಾಲೇಜು ಪ್ರಾಚಾರ್ಯ ಡಾ.ಡಿ.ಕೆ. ಗಾಂವ್ಕರ್ ಸ್ವಾಗತಿಸಿ, ನಿರ್ವಹಿಸಿದರು.