ಯಲ್ಲಾಪುರ: ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಕೋಟೆಮನೆಯಲ್ಲಿ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ,ಮಳೆಯ ರಭಸಕ್ಕೆ ಆರಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಕೋಟೆಮನೆಯ ಗೌರಿ ರಾಮಾ ಸಿದ್ದಿ, ರುಕ್ಮಿಣಿ ಕೃಷ್ಣಾ ಸಿದ್ದಿ, ದೇವಕಿ ನಾರಾಯಣ ಪಟಗಾರ, ನಾರಾಯಣ ಮಡೂರ ಪೂಜಾರಿ, ಕೃಷ್ಣ ನಾಗಾ ಸಿದ್ದಿ ಮೊದಲಾದವರ ಮನೆಗಳ ಹೆಂಚು ಮತ್ತು ತಗಡಿನ ಶೀಟುಗಳು ಬಿರುಗಾಳಿಗೆ ಹಾರಿ ಹೋಗಿದ್ದು, ಕೋಟೆಮನೆ ಅಂಗನವಾಡಿ ಕೇಂದ್ರಕ್ಕೂ ಹಾನಿಯಾಗಿದೆ.
ರಾತ್ರಿ ಘಟನೆ ನಡೆದ ತಕ್ಷಣ ಉಮ್ಮಚಗಿ ಗ್ರಾ.ಪಂ ಸದಸ್ಯ ಗ.ರಾ.ಭಟ್ಟ, ಗ್ರಾ.ಪಂ ಡಾಟಾ ಎಂಟ್ರಿ ನೌಕರ ಗಣಪತಿ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಶಾಸಕ ಶಿವರಾಮ ಹೆಬ್ಬಾರ್ ಮಾರ್ಗದರ್ಶನದಂತೆ ಬೆಳಿಗ್ಗೆ ಉಪ ತಹಶೀಲ್ದಾರ ಕೆ.ಎಸ್. ಫರ್ನಾಂಡೀಸ್, ವಿಲೇಜ್ ಅಕೌಂಟೆoಟ್ ಸವಿತಾ ಭಜಂತ್ರಿ, ಉಮ್ಮಚಗಿ ಗ್ರಾ.ಪಂ. ಕಾರ್ಯದರ್ಶಿ ಶಂಕರ ನಾಯ್ಕ, ಅಧ್ಯಕ್ಷೆ ರೂಪಾ ಪೂಜಾರಿ, ಸದಸ್ಯ ಖೈತಾನ್ ಡಿಸೋಜ, ಸಿಬ್ಬಂದಿ ವೆಂಕಟೇಶ, ಊರಿನ ಪ್ರಮುಖರಾದ ರಾಮಚಂದ್ರ ಸಿದ್ದಿ ಕೋಟೆಮನೆ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿರುತ್ತಾರೆ.