ಗೋಕರ್ಣ: ಏಕಾಏಕಿಯಾಗಿ ಉಂಟಾದ ಮಳೆ ಗಾಳಿಯಿಂದಾಗಿ ವಿವಿಧ ಭಾಗಗಳಲ್ಲಿ ತೀವ್ರ ಹಾನಿ ಉಂಟಾಗಿದ್ದು, ಹಲವು ವಾಹನದ ಮೇಲೆ ಮರಗಳು ಬಿದ್ದು ಸಂಪೂರ್ಣ ಹಾನಿಗೊಳಗಾಗಿದೆ. ಅಂಗಡಿ ಮುಂಗಟ್ಟುಗಳ ಶೀಟ್‌ಗಳು ಹಾರಿ ಹೋಗಿದ್ದು, ವಿದ್ಯುತ್ ಕಂಬ ಧರೆಗುರುಳಿ ಸಾಕಷ್ಟು ಹಾನಿ ಉಂಟಾಗಿದೆ.
ಮಳೆಯಿಂದಾಗಿ ಉಪ್ಪಿನ ಆಗರಕ್ಕೂ ತೊಂದರೆ ಉಂಟಾಗಿದ್ದು, ಸಮುದ್ರ ತೀರ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಹಲವೆಡೆ ಬೋಟ್‌ಗಳು ಸಣ್ಣಪುಟ್ಟ ಅನಾಹುತಗಳಿಗೆ ಒಳಗಾಗುವ ಸಾಧ್ಯತೆಯಿದ್ದು, ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಹಾನಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಸುಮಾರು 3 ಆಟೋ ರಿಕ್ಷಾ, 2 ದೊಡ್ಡ ವಾಹನದ ಮೇಲೆ ಮರಗಳು ಉರುಳಿ ಲಕ್ಷಾಂತರ ರೂ. ಹಾನಿಯಾಗಿದೆ.
ಗೋಕರ್ಣ ವ್ಯಾಪ್ತಿಯಲ್ಲಿ ಕೇವಲ ವಿದ್ಯುತ್ ಕಂಬ, ಪರಿವರ್ತಕ ನಾಶಗೊಂಡು ಹೆಸ್ಕಾಂಗೆ ಲಕ್ಷಾಂತರ ರೂ. ಹಾನಿಯಾಗಿದೆ. ಹಾಗೇ ವಿದ್ಯುತ್ ಕೂಡ ಕಡಿತಗೊಂಡಿದ್ದು, ಇದಕ್ಕೂ ಮುನ್ನ ಸಾರ್ಟ್ ಸಕ್ಯೂಟ್‌ನಿಂದಾಗಿ ಗೃಹೋಪಯೋಗಿ ಎಲ್ಲಾ ವಿದ್ಯುತ್ ಪರಿಕರಗಳು ನಾಶಗೊಂಡ ಘಟನೆ ಬಂಕಿಕೊಡ್ಲದ ಕೆಲವು ಮನೆಗಳಲ್ಲಿ ಕಂಡುಬಂದಿದೆ. ಹೀಗಾಗಿ ಮಳೆಗಾಲ ಆರಂಭಕ್ಕೂ ಮುನ್ನವೇ ಕರಾವಳಿ ಭಾಗದಲ್ಲಿ ಏಕಾಏಕಿಯಾಗಿ ಆರಂಭಗೊಂಡ ಮಳೆ, ಗಾಳಿ, ಗುಡುಗು, ಮಿಂಚಿನಿಂದಾಗಿ ಜನರು ಕಂಗೆಟ್ಟಿದ್ದಾರೆ.