ಬೆಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡದ ಗೇಣಿದಾರರಿಗೆ ನೆರವಾಗಲು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿ ಗೇಣಿದಾರರಿಗೆ ಮಾಲೀಕತ್ವ ಪ್ರದಾನ ಮಾಡುವ ಅಧಿನಿಯಮ-2011ರ ಸಿಂಧುತ್ವವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಉಡುಪಿಯ ಅದಮಾರು ಮಠ, ಗಣೇಶ್ ಪೈ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗಿಯ ಪೀಠ ಸುದೀರ್ಘ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಸೋಮವಾರ ಆದೇಶವನ್ನು ಪ್ರಕಟಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರು, ಯೋಗ್ಯ ಬೆಲೆ ಪಾವತಿಸಿ ಜಮೀನು ವಶಪಡಿಸಿಕೊಳ್ಳುವುದಕ್ಕೆ ವಿರುದ್ಧವಾಗಿ ಕನಿಷ್ಠ ಬೆಲೆ ಪಾವತಿಸುವ ಮೂಲಕ ಭೂಮಿ ವಶಕ್ಕೆ ಪಡೆಯುತ್ತಿರುವುದು ಸಂವಿಧಾನ ಬಾಹಿರ. ಇದರಿಂದ ಮೂಲಗಾರರು ಅಥವಾ ಭೂ ಮಾಲೀಕರರಿಗೆ ದೊಡ್ಡ ಮಟ್ಟದ ಅನ್ಯಾಯ ಮಾಡಿದಂತಾಗಲಿದೆ ಎಂದು ವಾದ ಮಂಡಿಸಿದ್ದರು.
ಗೇಣಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಮತ್ತು ಎ.ಜಿ.ಹೊಳ್ಳ, ಮೂಲಗೇಣಿದಾರರು ತಲೆ ತಲಾಂತರಗಳಿ0ದ ಭೂಮಿಯನ್ನು ಉಳುಮೆ ಮಾಡುತ್ತಾ ಬಂದಿದ್ದು, ಅವರಿಗೆ ಭೂಮಿಯ ಹಕ್ಕು ನೀಡುವುದು ನ್ಯಾಯ ಯೋಚಿತ. ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಕಾಯಿದೆ ಸಿಂಧುವಾಗಿದೆ. ಹೀಗಾಗಿ ಕಾಯಿದೆಯನ್ನು ಎತ್ತಿಹಿಡಿಯಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ರಾಜ್ಯ ಸರ್ಕಾರದ ಪರವಾಗಿ ವಿಶೇಷ ವಕೀಲ ಬಿ.ಎಲ್.ಆಚಾರ್ಯ ವಾದ ಮಂಡಿಸಿದ್ದರು.