ಯಲ್ಲಾಪುರ: ಪಟ್ಟಣ ಪಂಚಾಯತ ವತಿಯಿಂದ ಪಟ್ಟಣದಲ್ಲಿ ವ್ಯವಸ್ಥಿತವಾದ ಮೀನು ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೂ ಕಂಡಕಂಡಲ್ಲಿ ರಸ್ತೆಯಂಚಿಗೆ ಹಸಿ ಮೀನು ಮಾರಲಾಗುತ್ತಿದೆ.
ಭಾನುವಾರ ನಡೆಯುವ ತರಕಾರಿ ಸಂತೆಯ ನಡುವೆಯೂ ಮೀನು ಮಾರಾಟ ನಡೆಯುತ್ತಿದೆ. ಸಂಬ0ಧಿಸಿದ ಪ.ಪಂ ಅಧಿಕಾರಿಗಳಿಗೆ ಸಾರ್ವಜನಿಕರಿಗಾಗುವ ಈ ತೊಂದರೆಯ ಕುರಿತು ತಿಳಿಸಿದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಪ.ಪಂ ವ್ಯವಸ್ಥಿತ ಮೀನು ಮಾರುಕಟ್ಟೆ ನಿರ್ಮಿಸಿ, ಅಗತ್ಯ ಸೌಲಭ್ಯ ಕಲ್ಪಿಸಿ, ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಟೆಂಡರ್ ನೀಡಿ ಅಂಗಡಿ ಹಂಚಲಾಗಿದೆ. ಆ ಅಂಗಡಿಕಾರರು ಬಾಡಿಗೆ ಮತ್ತು ತೆರಿಗೆ ತುಂಬುತ್ತಿದ್ದಾರೆ. ಆದರೂ ಕೆಲವು ಪ.ಪಂ ಆಡಳಿತ ಮಂಡಳಿಯ ಸದಸ್ಯರ ಬೆಂಬಲದಿ0ದ ಅಧಿಕಾರಿಗಳು ಕಂಡಕಂಡಲ್ಲಿ ಮೀನು ವ್ಯಾಪಾರ ನಡೆಯಲು ಅನಧಿಕೃತ ಒಪ್ಪಿಗೆ ನೀಡಿದ್ದಾರೆ. ಸಾರ್ವಜನಿಕರು ಅನೇಕ ಬಾರಿ ಆಕ್ಷೇಪಿಸಿದರೂ ಪ.ಪಂ ಅಧಿಕಾರಿಗಳ ಕಣ್ಣು ತೆರೆಯಲೂ ಇಲ್ಲ; ಕಿವಿಗೆ ಹಾಕಿಕೊಳ್ಳಲೂ ಇಲ್ಲ. ಏಕೆಂದರೆ ರಸ್ತೆಯ ಮೇಲೆ ಮಾರಾಟ ನಡೆಸುವ ವ್ಯಾಪಾರಸ್ಥರಿಂದ ಪ.ಪಂ ನ ಕೆಲವು ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ಮಾಸಿಕ 25 ಸಾವಿರಕ್ಕಿಂತ ಹೆಚ್ಚಿನ ಹಣ ಸಂದಾಯವಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದಿದೆ.
ಸರ್ಕಾರದ ಆದೇಶದಂತೆ ಈಗಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಪೂರ್ಣಗೊಂಡಿದ್ದು, ಮುಂದಿನ ಆದೇಶದಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಬೇಕಿದ್ದು, ಅಲ್ಲಿಯವರೆಗೆ ತಹಶೀಲ್ದಾರರು ಆಡಳಿತಾಧಿಕಾರಿಯಾಗಿ ಮೇ 20ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಶಾಸಕ ಶಿವರಾಮ ಹೆಬ್ಬಾರರ ಪ್ರಯತ್ನದಿಂದ ಬಹುತೇಕ ಕಡೆಗಳಲ್ಲಿ ಕಾಂಕ್ರೆಟ್ ರಸ್ತೆ ಮತ್ತು ಗಟಾರ ನಿರ್ಮಾಣಗೊಂಡಿದೆ. ಮಳೆಗಾಲ ಕೆಲವೇ ದಿನಗಳಲ್ಲಿ ಪ್ರಾರಭವಾಗಬಹುದು. ಇಷ್ಟು ದಿನಗಳ ಕಾಲ ಚುನಾವಣೆಯ ಕಾರಣ ಹೇಳಿ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಗಳನ್ನು ಬದಿಗೊತ್ತಿಟ್ಟಿದ್ದರು. ಗಟಾರ ಸ್ವಚ್ಚತಾ ಕಾರ್ಯ ಮಾಡದಿದ್ದರೆ ನೀರು ತುಂಬಿ ಸಾರ್ವಜನಿಕರಿಗೆ ತೊಂದರೆಯ ಜೊತೆ ಸೊಳ್ಳೆಗಳಿಗೆ ಆಶ್ರಯ ತಾಣವಾಗಲಿದೆ. ಈ ಕುರಿತು ಪ.ಪಂ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕಿದೆ.