ಶಿರಸಿ: ತಾಲೂಕಿನ ಸೊಪ್ಪಿನಮನೆಯಲ್ಲಿ 200 ಕ್ಕೂ ಅಧಿಕ ಅಡಿಕೆ ಸಸಿಗಳನ್ನು ಕಾಡು ಹಂದಿಗಳ ಗುಂಪು ನಾಶ ಮಾಡಿದ್ದು, ಲಕ್ಷಾಂತರ ರೂ. ಹಾನಿಯುಂಟಾಗಿದೆ.
ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಬರೂರು ಗ್ರಾಮದ ಸೊಪ್ಪಿನ ಮನೆ ಊರಿನಲ್ಲಿ ಮಂಜುನಾಥ ಶೇಟ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಹಂದಿ ಹಾವಳಿ ಮಾಡಿದ್ದು, ಶನಿವಾರ ತಡರಾತ್ರಿ ಹಂದಿಗಳು ಹಿಂಡಾಗಿ ಬಂದು 3 ಎಕರೆ ವ್ಯಾಪ್ತಿಯ ಅಡಿಕೆ ತೋಟದಲ್ಲಿ ಹಾನಿ ಉಂಟು ಮಾಡಿದೆ.
ಅಂದಾಜು 200ಕ್ಕೂ ಅಧಿಕ ಗಿಡಗಳು ನಾಶವಾಗಿದೆ. ಮುಂದಿನ ವರ್ಷ ಪೀಕಿಗೆ ಬರುವಂತಹ ಗಿಡಗಳನ್ನು ಹಂದಿ ನಾಶ ಮಾಡಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಪಟ್ಟ ಕಷ್ಟ ಮಣ್ಣು ಪಾಲಾಗಿದೆ. ಶನಿವಾರ ರಾತ್ರಿ ಹಂದಿಗಳು ಅಡಿಕೆ ಗಿಡ ನಾಶ ಮಾಡಿದೆ. ಮಕ್ಕಳಂತೆ ಬೆಳೆಸಿದ್ದ ಗಿಡ ಕಣ್ಣೆದುರಲ್ಲೇ ನಾಶವಾಗಿದೆ. ಹಂದಿ ಹೊಡೆದರೆ ಅರಣ್ಯ ಇಲಾಖೆಯವರು ತಪ್ಪು ಎನ್ನುತ್ತಾರೆ. ಆದರೆ ಇದಕ್ಕೆ ಯಾರು ಹೊಣೆ ? ಎಂದು ಮಾಲೀಕ ಮಂಜುನಾಥ ಶೇಟ್ ಪ್ರಶ್ನಿಸಿದ್ದಾರೆ.
‘ಲಕ್ಷಾಂತರ ರೂ. ಹಾನಿಯಾಗಿದ್ದು, ಮುಂದಿನ ಬೆಳೆಯೂ ನಾಶವಾಗಿದೆ. ಪುನಃ ನಾಲ್ಕೈದು ವರ್ಷ ಕಷ್ಟ ಪಡಬೇಕಾಗಿದೆ. ಆಗಲೂ ಇದೇ ಹಂದಿ ಕಾಟ ಎದುರಾಗಬಹುದು. ಕಾರಣ ಇಲಾಖೆ ಸೂಕ್ತ ಪರಿಹಾರ ನೀಡಬೇಕು’ ಎಂದು ಸ್ಥಳೀಯ ಗ್ರಾಪಂ ಸದಸ್ಯ ಸಂದೇಶ ಭಟ್ ಬೆಳಖಂಡ ಆಗ್ರಹಿಸಿದರು.
ಇನ್ನು ಹಂದಿ ಸೇರಿದಂತೆ ಇತರ ಕಾಡು ಪ್ರಾಣಿಗಳ ಕಾಟ ಮಲೆನಾಡು ಭಾಗದಲ್ಲಿ ಹೆಚ್ಚಾಗಿದ್ದು, ಅಡಿಕೆ, ಭತ್ತದ ಗದ್ದೆಗಳು ನಾಶವಾಗುವುದು ಸಾಮಾನ್ಯವಾಗಿದೆ. ಆದರೆ ಇಲಾಖೆಯಿಂದ ಮಾತ್ರ ಇದಕ್ಕೆ ಯಾವುದೇ ಸೂಕ್ತ ಪರಿಹಾರ ಬಾರದಿರುವುದು ರೈತರ ನಿದ್ದೆಗೆಡಿಸಿದೆ. ಇದರಿಂದ ಪ್ರಾಣಿ ಕಾಟ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.