Slide
Slide
Slide
previous arrow
next arrow

ನೌಕಾಸೇನಾ ಸಿಬ್ಬಂದಿಯಿಂದ ತೊಂದರೆ; ಮೀನುಗಾರರೊಂದಿಗೆ ಸಮಾಲೋಚನೆ

300x250 AD

ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರ ಮೇಲೆ ಭಾರತೀಯ ನೌಕಾಸೇನೆ ಗಸ್ತು ಸಿಬ್ಬಂದಿಯಿಂದ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕದಂಬ ನೌಕಾನೆಲೆ ಹಿರಿಯ ಅಧಿಕಾರಿಗಳು ಯುವ ಮೀನುಗಾರರ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಇಲ್ಲಿನ ಕದಂಬ ನೌಕಾನೆಲೆ ಕಚೇರಿಯಲ್ಲಿ ಸಭೆ ನಡೆಯಿತು. ಕಾರವಾರ, ಅಂಕೋಲಾ ಭಾಗದಲ್ಲಿ ಅರಬ್ಬಿ ಸಮುದ್ರದಲ್ಲಿ ನೌಕಾನೆಲೆ ಗಸ್ತು ಸಿಬ್ಬಂದಿಯು ಮೀನುಗಾರರ ಬಲೆ ಕತ್ತರಿಸುವುದು, ವೇಗದ ಬೋಟಿನ ಮೂಲಕ ಅಲೆ ಎಬ್ಬಿಸಿ ಭಯ ಬೀಳಿಸಿದ ಘಟನೆ ನಡೆದಿತ್ತು. ಅದನ್ನು ಖಂಡಿಸಿ ಯುವ ಮೀನುಗಾರರ ಸಂಘರ್ಷ ಸಮಿತಿಯು ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿತ್ತು.
ಮನವಿ ಆಧರಿಸಿ ನೌಕಾನೆಲೆಯ ಅಧಿಕಾರಿಗಳು ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಯುವ ಮೀನುಗಾರರ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ ತಿಳಿಸಿದರು. ನೌಕಾನೆಲೆ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧ ಇದೆ. ಹಾಗಾಗಿ ಹತ್ತಿರದಲ್ಲಿ ಮೀನುಗಾರಿಕೆ ಮಾಡಬಾರದು. ಭದ್ರತೆ ದೃಷ್ಟಿಯಿಂದ ಇದು ಅನಿವಾರ್ಯ ಎಂದು ನೌಕಾನೆಲೆ ಅಧಿಕಾರಿಗಳು ಸಮಜಾಯಿಷಿ ನೀಡಿದರು.
ನೌಕಾನೆಲೆ ಸಮುದ್ರ ಗಡಿಯ ಗುರುತು ಪ್ರದೇಶಕ್ಕೂ ಬೋಟಿನಲ್ಲಿ ಹೋಗಿ ವಿವರಣೆ ನೀಡಿದ್ದಾರೆ. ಸ್ಥಳ ಭೇಟಿ ಬಳಿಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಹಲವು ವಿಚಾರ ಚರ್ಚೆಯಾಗಿದೆ. ಅಂತಿಮವಾಗಿ ಸ್ಥಳೀಯ ಮೀನುಗಾರರ ಸಮಸ್ಯೆಯನ್ನೂ ಆಲಿಸಲು ಅಧಿಕಾರಿಗಳು ಒಪ್ಪಿದರು ಎಂದು ಮಾಹಿತಿ ನೀಡಿದರು.
ಕದಂಬ ನೌಕಾನೆಲೆಯಲ್ಲಿ ವಿಕ್ರಮಾದಿತ್ಯ ನೌಕೆ ಸೇರಿ ದೇಶದ ಅನೇಕ ನೌಕೆಗಳು ಇರುವುದರಿಂದ ಭದ್ರತೆಗೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ನೌಕಾನೆಲೆ ಸಮುದ್ರ ಗಡಿಯಿಂದ ಒಂದು ಕಿ.ಮೀ. ದೂರದಲ್ಲಿ ಮೀನುಗಾರರು ಮೀನುಗಾರಿಕೆ ನಡೆಸಬೇಕು. ಗಡಿಯ ಹತ್ತಿರವೂ ಬರಬಾರದು. ಅದರಿಂದ ಭದ್ರತೆಗೆ ತೊಂದರೆ ಆಗುತ್ತದೆ ಎಂದು ನೌಕಾನೆಲೆ ಅಧಿಕಾರಿಗಳು ವಿವರಿಸಿದರು.
ಭದ್ರತೆ ವಿಚಾರ ಏನೇ ಇದ್ದರೂ, ಅದರಿಂದ ಮೀನುಗಾರರಿಗೆ ತೊಂದರೆ ಆಗಬಾರದು. ಸಮುದ್ರದಲ್ಲಿ ಹೆಚ್ಚಿನ ಮೀನು ಸಿಗುವ ಸ್ಥಳವೇ ಕಾರವಾರ, ಅಂಕೋಲಾ ಭಾಗದಲ್ಲಿದೆ. ಗಡಿಯಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರರು ಬರಬಾರದು ಎಂದರೆ, ಮೀನು ಹಿಡಿಯುವುದಾದರೂ ಎಲ್ಲಿ? ಇದು ಸರಿಯಾದ ಕ್ರಮ ಅಲ್ಲ. ಮೀನುಗಾರರ ಸಮಸ್ಯೆ ಕೂಡ ಕೇಳಿ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದು ಉತ್ತಮ ಎಂದು ಸಲಹೆ ನೀಡಿದ್ದೇನೆ. ಅದಕ್ಕೆ ನೌಕಾನೆಲೆ ಅಧಿಕಾರಿಗಳು ಒಪ್ಪಿದ್ದಾರೆ ಎಂದು ವಿನಾಯಕ ಹರಿಕಂತ್ರ ತಿಳಿಸಿದರು.
ಮೀನುಗಾರ ಮುಖಂಡರಿಗಿಂತ ಹೆಚ್ಚಾಗಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರ ಸಮಸ್ಯೆ ಕೇಳಲು ಹೇಳಿದ್ದೇನೆ. ಒಂದು ವಾರದ ನಂತರ ಪ್ರತಿ ಊರಿನಿಂದ ಐವರು ಮೀನುಗಾರರ ಜತೆ ಸಭೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವಿನಾಯಕ ತಿಳಿಸಿದರು.

300x250 AD
Share This
300x250 AD
300x250 AD
300x250 AD
Back to top