ಅಂಕೋಲಾ: ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಹರಿದು ಓಡಲೆತ್ನಿಸಿದ ಕಳ್ಳನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಹೊನ್ನಕೇರಿ ನಾಗೂರಿನ ಯಶ್ವಂತ ನಾಯ್ಕ (28) ಬಂಧಿತ ಆರೋಪಿ. ಹಟ್ಟಿಕೇರಿಯ ಈಶ್ವರ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಿಕೊಂಡು ಬರುತ್ತಿದ್ದ ವೇದಾ ಎನ್ನುವ ಮಹಿಳೆಗೆ ಎದುರಾದ ಈತ ತನ್ನ ಕೈಲಿರುವ ಚೀಟಿಯೊಂದನ್ನು ತೋರಿಸಿ ಅದರಲ್ಲಿ ಏನು ಬರೆದಿದೆ ಎಂದು ಓದಿ ಹೇಳುವಂತೆ ತಿಳಿಸಿ, ಅವಳ ಲಕ್ಷ್ಯವನ್ನು ಚೀಟಿಯತ್ತ ಸೆಳೆದು ಕೂಡಲೇ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿ ಎಳೆದಿದ್ದ. ಅಚಾನಕ್ಕಾಗಿ ನಡೆದ ಘಟನೆಯಿಂದ ಬೆದರಿದ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ.
ಮಾಂಗಲ್ಯ ಸರ ಹರಿದ ಕಳ್ಳ ಸಂದಿಗೊಂದಿಗಳಲ್ಲಿ ಓಡಿ ಪರಾರಿಯಾಗಲೆತ್ನಿಸಿದ್ದ. ಕೂಡಲೇ ಮಹಿಳೆ ಕಳ್ಳ ಕಳ್ಳ ಎಂದು ಜೋರಾಗಿ ಕೂಗಿ ಕೊಂಡಾಗ ಕಳ್ಳತನದ ಸುದ್ದಿ ಗ್ರಾಮದೆಲ್ಲೆಡೆ ಹರಡಿ ಆತನ ಪತ್ತೆಗೆ ಜನ ಮುಂದಾಗಿದ್ದಾರೆ. ಸಂಶಯಾಸ್ಪದವಾಗಿ ಹೆದ್ದಾರಿ ದಾಟಿ ಹೋಗುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯರೇ ಹಿಡಿದು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಸಿಪಿಐ ಜೆ.ಆರ್.ಡಿಸೋಜಾ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.