ಗೋಕರ್ಣ: ಬಳಲೆ-ಮಾದನಗೇರಿಯ ಸುತ್ತಮುತ್ತಲಿನ ಭಾಗಗಳಲ್ಲಿ ಬೇಸಿಗೆಯಲ್ಲಿ ಉಪ್ಪು ನೀರು ಆವೃತವಾಗಿರುವುದರಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಅನುಭವಿಸುವಂತಾಗಿದೆ. ಈ ಭಾಗದಲ್ಲಿರುವ ನೂರಾರು ಬಾವಿಯ ನೀರು ಬೇಸಿಗೆಯಲ್ಲಿ ಉಪ್ಪಾಗುತ್ತದೆ. ಹೀಗಾಗಿ ದೂರದ ಪ್ರದೇಶದಿಂದ ಕುಡಿಯುವ ಹಾಗೂ ಇತರೆ ಬಳಕೆಗೆ ಸೈಕಲ್, ಬೈಕ್ ಮೂಲಕ ತಂದರೆ, ಮಹಿಳೆಯರು ತಲೆಯ ಮೇಲೆ ಕೊಡ ಹೊತ್ತುಕೊಂಡು ಬರುವ ಸನ್ನಿವೇಶ ಕಂಡುಬರುತ್ತದೆ.
ಕುಡಿಯುವ ನೀರು ಪೂರೈಕೆಗಾಗಿ ವಿವಿಧ ಯೋಜನೆಗಳು ಬಂದಿದ್ದು, ಹಾಗೇ ನೀರಿನ ಪೈಪ್‌ಲೈನ್ ಕೂಡ ನೀಡಲಾಗಿದ್ದರೂ ಕೂಡ ಇಲ್ಲಿ ಅಗತ್ಯದಷ್ಟು ನೀರು ಸಾಲುತ್ತಿಲ್ಲ. ಅಘನಾಶಿನಿ ನದಿಯ ಹಿನ್ನೀರು ಪ್ರದೇಶದಲ್ಲಿ ಉಪ್ಪು ನೀರು ಒಳ ಪ್ರವೇಶಿಸದಂತೆ ಖಾರ್ಲೆಂಡ ನಿರ್ಮಾಣ ಮಾಡಿದರೆ ತಕ್ಕಮಟ್ಟಿಗಾದರೂ ಬಾವಿಯ ನೀರನ್ನು ಸಿಹಿಯಾಗಿ ಉಳಿಸಿಕೊಳ್ಳಲು ಸಾಧ್ಯವಿದೆ.
ಇನ್ನು ಸುತ್ತಮುತ್ತಲಿನ ಬೇರೆ ಬೇರೆ ಪ್ರದೇಶಗಳಲ್ಲಿ ಸಿಹಿನೀರು ಇರುವುದರಿಂದ ಬಗೆಬಗೆಯ ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಹಾಗೇ ಸಾವಯವ ಗೊಬ್ಬರವನ್ನು ಬಳಸುವುದರಿಂದ ಉತ್ತಮ ಬೇಡಿಕೆಯು ಇದೆ. ಆದರೆ ಈ ನೂರಾರು ಎಕರೆ ಪ್ರದೇಶದಲ್ಲಿ ಉಪ್ಪಿನ ತೇವಾಂಶ ಇರುವುದರಿಂದ ಇಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ.
ಬಹುತೇಕವಾಗಿ ಇಂತಹ ಭಾಗಗಳಲ್ಲಿ ಮೀನುಗಾರ ಕುಟುಂಬವಾದ ಹರಿಕಂತ್ರ, ಹಾಲಕ್ಕಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಇವರ ಕೂಗು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಬೇಗ ಕೇಳುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಖಾರ್ಲೆಂಡ್ ನಿರ್ಮಿಸುವ ಮೂಲಕ ಸಿಹಿನೀರನ್ನು ಉಳಿಸಿಕೊಳ್ಳಬೇಕಾಗಿದೆ.