ಕಾರವಾರ: ಕರ್ನಾಟಕ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನೆರವೇರುವಲ್ಲಿ ಪಾತ್ರ ವಹಿಸಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಜವಾನರನ್ನ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸುಸೂತ್ರ ಚುನಾವಣೆಗಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ನಾಲ್ಕು ಕಂಪನಿಗಳ 392 ಜವಾನರು ಉತ್ತರಕನ್ನಡ ಜಿಲ್ಲೆಗೆ ಆಗಮಿಸಿ, ಎಲ್ಲಾ ತಾಲೂಕುಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡು ಕಳೆದ ಒಂದು ತಿಂಗಳಿನಿ0ದ ಬಿಡುವಿಲ್ಲದೆ ಕರ್ತವ್ಯ ನಿಭಾಯಿಸಿದ್ದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ತಡೆಗೆ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ, ಶಾಂತಿ- ಸುವ್ಯವಸ್ಥೆ ಕಾಪಾಡಿ, ಸುಸೂತ್ರವಾಗಿ ಮತದಾನ ನಡೆಯಲು ಮತಗಟ್ಟೆ, ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ನಿಭಾಯಿಸುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.
ಜಿಲ್ಲಾ ಪೊಲೀಸರ ಜೊತೆಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತ ಚುನಾವಣೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ್ದಕ್ಕಾಗಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಶಿರವಾಡದ ರೈಲ್ವೆ ನಿಲ್ದಾಣಕ್ಕೆ ತೆರಳಿ, ಜಿಲ್ಲೆಯಿಂದ ನಿರ್ಗಮಿಸುತ್ತಿದ್ದ ಜವಾನರಿಗೆ ಗುಲಾಬಿ ಹೂ ನೀಡಿ, ಸಿಹಿ ತಿನಿಸಿ ಧನ್ಯವಾದ ಹೇಳಿ ಬೀಳ್ಕೊಟ್ಟರು. ಸಿಆರ್ಪಿಎಫ್‌ನ ಇನ್ಸ್ಪೆಕ್ಟರ್ ಸತೀಶಕುಮಾರ್ ಸಿಂಗ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಜೋನಿ ಬೆಲ್ಲ ಹಾಗೂ ಅಶೋಕ ಸ್ತಂಭದ ಸ್ಮರಣಿಕೆ ನೀಡಿ ಗೌರವಿಸಿದರು.
ಸನ್ಮಾನಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ತಾವು ಚುನಾವಣೆಗಾಗಿ ಇಲ್ಲಿಗೆ ಬಂದಿದ್ದೀರಿ. ದಿನ- ರಾತ್ರಿ ಎನ್ನದೆ ಇಲ್ಲಿ ಶಾಂತಿ ನೆಲೆಸಲು ಮಾಡಿದ ನಿಮ್ಮ ಯೋಗದಾನವನ್ನ ನಾವು ಎಂದಿಗೂ ಮರೆಯುವುದಿಲ್ಲ. ನಾವು ಇಲ್ಲಿ ನಿಶ್ಚಿಂತರಾಗಿ ರಾತ್ರಿ ನಿದ್ದೆ ಮಾಡಲು ತಾವು ನಿದ್ದೆಗೆಟ್ಟು ಕರ್ತವ್ಯ ನಿಭಾಯಿಸುತ್ತೀರಿ. ನಾವು ನಿಮಗೆ ಆಭಾರಿಯಾಗಿದ್ದೇವೆ ಎಂದು ಗೌರವಪೂರ್ವಕವಾಗಿ ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಆರ್ಪಿಎಫ್ ಇನ್ಸ್ಪೆಕ್ಟರ್ ಸತೀಶಕುಮಾರ್ ಸಿಂಗ್ ಮಾತನಾಡಿ, ಚುನಾವಣಾ ಕರ್ತವ್ಯಕ್ಕೆಂದು ಬಂದ ನಮಗೆ ಕರ್ನಾಟಕದ ಜನತೆ ತೋರಿದ ಪ್ರೀತಿಗೆ ನಮ್ಮ ಎದೆತುಂಬಿ ಬಂತು. ಇದಕ್ಕಾಗಿ ನನ್ನ ಹೃದಯಾಂತರಾಳದ ಧನ್ಯವಾದವನ್ನ ಹೇಳಬಯಸುತ್ತೇನೆ. ದೇವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ, ಕರ್ನಾಟಕದ ಪ್ರತಿ ನಾಗರಿಕನೂ ಎಂದಿಗೂ ಹೀಗೆ ಸಂತೋಷದಿ0ದಿರಲಿ ಎಂದು. ಅನೇಕತೆಯಲ್ಲಿ ಏಕತೆ ಇಲ್ಲಿ ಹೀಗೇ ಇರಲಿ ಎಂದು ಆಶಿಸುವೆ. ನಮಗಿಲ್ಲಿ ಸಿಕ್ಕ ಪ್ರೀತಿಯನ್ನ ಬೇರೆಲ್ಲೂ ನಾವು ಕಂಡಿಲ್ಲ ಎಂದರು.
ಇನ್ನೋರ್ವ ಇನ್ಸ್ಪೆಕ್ಟರ್ ಎಂ.ಡಿ.ಸೆಬಾಸ್ಟಿಯನ್, ಕರ್ನಾಟಕದ ಜನತೆ ಚುನಾವಣೆಯನ್ನ ಸುಸೂತ್ರವಾಗಿ ನಡೆಸಲು ನಮ್ಮೊಂದಿಗೆ ಸಹಕಾರ ನೀಡಿದ್ದಾರೆ. ಎಲ್ಲಿಯೂ ಸಣ್ಣಪುಟ್ಟ ಗಲಾಟೆ ಕೂಡ ನಡೆದಿಲ್ಲ. ಇಲ್ಲಿ ಎಂದಿಗೂ ಹೀಗೆ ಶಾಂತಿ ನೆಲೆಸಿರಲಿ ಎಂದು ಆಶಿಸಿದರು.
ಈ ವೇಳೆ ಜನಶಕ್ತಿ ವೇದಿಕೆಯ ಪ್ರಮುಖರಾದ ರಾಮ ನಾಯ್ಕ, ದೀಪಕ್ ನಾಯ್ಕ, ಅಲ್ತಾಫ್ ಶೇಖ್, ಸೂರಜ್ ಕೂರ್ಮಕರ್, ಮಾಸ್ಟರ್ ಧ್ರುವ ಹಾಗೂ ಸಿಆರ್ಪಿಎಫ್‌ನ ಜವಾನರು ಇದ್ದರು.