ಕಾರವಾರ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ವಿಶೇಷತೆಗಳೂ ಕಂಡುಬಂದಿವೆ. ಕೆಲವರು ದೂರದ ಅಮೆರಿಕದಿಂದ ತಾಯ್ನಾಡಿಗೆ ವಾಪಸಾಗಿ ಮತದಾನ ಮಾಡಿ ತಮ್ಮ ಕರ್ತವ್ಯ ನಿರ್ವಹಿಸಿದ್ದರೆ, ಜಿಲ್ಲಾಡಳಿತವು ಮೊದಲ ಬಾರಿಗೆ ಮತದಾನ ಮಾಡಿದ ಯುವಕರಿಗೆ ವಿಶೇಷ ಉಡುಗೊರಗಳನ್ನು ನೀಡಿ ಪ್ರೋತ್ಸಾಹಿಸಿದೆ.
ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರರಿಗೆ ಮತಗಟ್ಟೆಯಲ್ಲಿ ಗಿಡಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡಲಾಯಿತು. ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ತೆರೆಯಲಾದ ಮೂರು ಮತಗಟ್ಟೆಗಳಲ್ಲಿ ಬೆಳಗ್ಗೆಯೇ ಆಗಮಿಸಿದ ಐದಕ್ಕೂ ಅಧಿಕ ಯುವ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಬಳಿಕ ಮತದಾನ ಮಾಡಿದ ಯುವ ಮತದಾರರಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ನಗರಸಭೆ ಆಯುಕ್ತ ಜುಬಿನ್ ಮಹಾಪಾತ್ರ ಹಾಗೂ ಮತಗಟ್ಟೆ ಅಧಿಕಾರಿಗಳು ಹೂವು- ಹಣ್ಣುಗಳ ಗಿಡಗಳನ್ನು ನೀಡಿ ಅಭಿನಂದಿಸಿದರು. ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಹಾಕುವ 50 ಯುವಕ- ಯುವತಿಯರಿಗೆ ಗಿಡಗಳನ್ನು ನೀಡಿ ಅಭಿನಂದಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ಇನ್ನೂ ವಿಶೇಷವೆಂಬಂತೆ ಶಿರಸಿಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡುವುದಕ್ಕೆಂದೇ ದೂರದ ಅಮೆರಿಕದಿಂದ ತಾಯ್ನಾಡಿಗೆ ಮರಳಿ ಮತದಾನ ಮಾಡಿದ್ದಾರೆ. ಶಿರಸಿ ತಾಲೂಕಿನ ಬೆಟ್ಟಕೊಪ್ಪದ ಅಶ್ವಿನಿ ರಾಜಶೇಖರ ಭಟ್ಟ ಅವರು ಅಮೆರಿಕದಿಂದ ಬಂದಿದ್ದು ಕಾನಗೋಡ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಇದು ಅನೇಕರಿಗೆ ಸ್ಫೂರ್ತಿಯಾಗಿದೆ.