ಅಂಕೋಲಾ: ಮಾಜಿ ಸಚಿವ ಆನಂದ ಅಸ್ನೋಟಿಕರ್ ಗೆ ತಾಕತ್ತು ಇದ್ದರೆ ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿತ್ತು. ಅದು ಬಿಟ್ಟು ಮಾಜಿ ಶಾಸಕರ ಗುಲಾಮನಂತಾಗಿ ವರ್ತಿಸುತ್ತಿರುವುದು ನಾಚಿಕೆಗೇಡು ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅಬ್ಬರಿಸಿದ್ದಾರೆ.
ವಿವಿಧೆಡೆ ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಪರ ಪ್ರಚಾರ ನಡೆಸಿದ ಅವರು ಆನಂದ್ ಅಸ್ನೋಟಿಕರ್ ಹಾಗೂ ಸತೀಶ್ ಸೈಲ್ ವಿರುದ್ಧ ಕಿಡಿಕಾರಿದರು. ಆನಂದ್ ಆ ಪಕ್ಷ ಸೇರುತ್ತೇನೆ. ಈ ಪಕ್ಷ ಸೇರುತ್ತೇನೆ ಎಂದು 2-3 ತಿಂಗಳ ಕಾಲ ಕ್ಷೇತ್ರದಲ್ಲಿ ಅವರ ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸಿದರು. ಆನಂದ ಅಸ್ನೋಟಿಕರ್ ಕೇವಲ ಸುಳ್ಳು ಸುಳ್ಳು ಹೇಳುತ್ತ ಎಲ್ಲರನ್ನೂ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮತದಾರರು ಪ್ರಬುದ್ಧರಿದ್ದಾರೆ. ಇಂತಹ ನಾಟಕಗಳಿಗೆಲ್ಲ ಸೂಕ್ತ ಉತ್ತರ ನೀಡಲಿದ್ದಾರೆ. ಮಾಜಿ ಸಚಿವರು ಕಾಂಗ್ರೆಸ್ ನ ಒಬ್ಬ ಅಭ್ಯರ್ಥಿಗೆ ಬೆಂಬಲಿಸುತ್ತೇನೆ ಎನ್ನುತ್ತಿದ್ದಾರೆ. ಜೆಡಿಎಸ್ ನ ಅಭ್ಯರ್ಥಿಗೂ ಬೆಂಬಲಿಸುವುದಾಗಿ ಹೇಳಿದ್ದರು. ಪಕ್ಷೇತರವಾಗಿ ಸ್ಪರ್ಧಿಸಿದ ಅಭ್ಯರ್ಥಿಗೂ ಬೆಂಬಲಿಸುವುದಾಗಿ ಹೇಳಿದ್ದರು. ದಿನಕ್ಕೊಂದು ಹೇಳಿಕೆ ನೀಡುತ್ತ ರಾಜಕೀಯ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಕಾರವಾರ ಅಂಕೋಲಾ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿ ಪಡಿಸಬಹುದು ಎನ್ನುವುದನ್ನು ಶಾಸಕಿ ರೂಪಾಲಿ ಎಸ್.ನಾಯ್ಕ ಮಾಡಿ ತೋರಿಸಿದ್ದಾರೆ. ಅವರನ್ನು ಭಾರಿ ಬಹುಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಶಾಸಕಿ ರೂಪಾಲಿ ಎಸ್.ನಾಯ್ಕ ಒಬ್ಬ ಮಹಿಳೆಯಾದ ತಮ್ಮನ್ನು ರಾಜಕೀಯವಾಗಿ ಮುಗಿಸಲು ಎಲ್ಲರೂ ಒಂದಾಗಿದ್ದಾರೆ. ನಮ್ಮ ಕ್ಷೇತ್ರದ ಮತದಾರರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು. ಮತ ನೀಡಿ ಆಶೀರ್ವದಿಸುವಂತೆ ವಿನಂತಿಸಿದರು. ಪಕ್ಷದ ವಕ್ತಾರರಾದ ನಾಗರಾಜ ನಾಯಕ, ಭಾಸ್ಕರ ನಾರ್ವೇಕರ ಮತ್ತಿತರರು ಉಪಸ್ಥಿತರಿದ್ದರು.