ಕುಮಟಾ: ಭಜರಂಗದಳ ನಿಷೇಧಿಸುವ ವಿಷಯವೇ ಇಲ್ಲ. ಬಿಜೆಪಿಗರು ಜನರ ದಿಕ್ಕು ತಪ್ಪಿಸಲು ಸುಳ್ಳು ಹೇಳುತ್ತಿದ್ದು, ಈ ಸುಳ್ಳಿಗೆ ಮತದಾರರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭಜರಂಗ ದಳವನ್ನು ನಿಷೇಧ ಮಾಡಲಿದೆ ಎಂದು ಬಿಜೆಪಿಗರು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಗಲಭೆ, ದೊಂಬಿ ಸೇರಿದಂತೆ ಸಮಾಜದ ಶಾಂತಿ ಭಂಗ ಮಾಡುವ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಥವಾ ನಿಷೇಧ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದಷ್ಟೆ ಹೇಳಲಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಸಂವಿಧಾನ ಮತ್ತು ಕಾನೂನು ಬಾಹಿರ ಕೃತ್ಯ ವ್ಯಸಗಿರುವುದು ಸಾಭೀತಾದರೆ ಮಾತ್ರ ಇಂಥ ಕ್ರಮ ವಹಿಸಲಾಗುವುದು. ಆದರೆ ಬಿಜೆಪಿಯು ಈಗಾಗಲೇ ಶ್ರೀರಾಮ ಸೇನೆಯನ್ನು ನಿಷೇಧ ಮಾಡಿಲ್ಲವೇ..? ಎಂದು ಪ್ರಶ್ನಿಸಿದರು.
ಈ ಬಿಜೆಪಿಗರು ಯಾವಾಗಲೂ ಸುಳ್ಳಿನ ಮೇಲೆ ಅಥವಾ ಶವದ ಮೇಲೆ ರಾಜಕಾರಣ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಅಭಿವೃದ್ಧಿ ಮತ್ತು ಜನಪರ ಕಾಳಜಿಯಿಂದಲೇ ಚುನಾವಣೆ ಎದುರಿಸುತ್ತದೆ. ಮತದಾರರಿಗೆ ಈಗಾಗಲೇ ಬಿಜೆಪಿಗರ ಬಣ್ಣ ತಿಳಿದಿದೆ. ಹಾಗಾಗಿ ಈ ಬಾರಿ ಕಾಂಗ್ರೆಸ್‌ನ್ನೆ ರಾಜ್ಯದಲ್ಲಿ ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ ಆಳ್ವಾರ ಬಗ್ಗೆ ಮಾತನಾಡಿದ ಅವರು, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರು ಸಜ್ಜನಿಕೆಯ ರಾಜಕಾರಣಿ. 50 ವರ್ಷಗಳು ಪಕ್ಷದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ಪಕ್ಷದಲ್ಲಿ ಹಿಡಿತವಿದ್ದರೂ ತನ್ನ ಮಗನಿಗೆ ಸ್ಥಾನ ಕೊಡಿಸಲು ಮುಂದಾಗಿಲ್ಲ. ತನ್ನ ಮಗನಾದರೂ ಅರ್ಹತೆಯ ಮೇಲೆಯೇ ಸ್ಥಾನ ಗಳಿಸಬೇಕು ಎಂಬ ಮನಸ್ಥಿತಿ ಅವರದ್ದಾಗಿತ್ತು. ಅದಕ್ಕಾಗಿ ನಿವೇದಿತ್ ಆಳ್ವಾ 10 ವರ್ಷಗಳ ಕಾಲ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಿವೇದಿತ್ ಆಳ್ವಾ ಅವರು ಕರಾವಳಿ ಅಭಿವ್ರದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಶಿರಸಿ ಕ್ಷೇತ್ರದಲ್ಲಿ 30 ಕೋಟಿ ಅಭಿವೃದ್ಧಿ ಕಾಮಗಾರಿ ಮಾಡಿಸಿದ್ದಾರೆ. ಅಲ್ಲದೇ ವಿವಿಧ ಅನುದಾನಗಳಿಂದ ಅನೇಕ ಸಾಮಾಜಿಕ ಕಾರ್ಯ ಸೇರಿದಂತೆ ಅಭಿವ್ರದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಇಂಥ ಅಭಿವೃದ್ಧಿಪರ ಚಿಂತನೆ ಇರುವ ಅಭ್ಯರ್ಥಿಗೆ ಮತದಾರರು ತಮ್ಮ ಅಮೂಲ್ಯ ಮತವನ್ನು ನೀಡುವ ಮೂಲಕ ಈ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಇನ್ನು ತಾನು ಪಕ್ಷದ ಸ್ಟಾರ್ ಪ್ರಚಾರಕನಾಗಿದ್ದು, ಕ್ಷೇತ್ರದಲ್ಲಿ ಹಾಲಕ್ಕಿ ಗೌಡ ಸಮಾಜದವರನ್ನು ಭೇಟಿ ಮಾಡಿದಾಗ ತಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಮನವಿ ಮಾಡಿದರು. ಖಂಡಿತ ನಾನು ರಾಜ್ಯಸಭೆಯ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದು, ಗೌಡ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸುತ್ತೇನೆ. ಅಲ್ಲದೇ ಮೀನುಗಾರರಿಗೆ ಪ್ರತಿ ತಿಂಗಳು 500 ಲೀಟರ್ ಸೀಮೆ ಎಣ್ಣೆ ನೀಡುತ್ತೇವೆ. ಸ್ವಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ 3 ಲಕ್ಷದ ವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸುತ್ತೇವೆ. ಇನ್ನು ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದಲ್ಲಿ ಶೇ. 25ರಷ್ಟು ಕನ್ನಡಿಗೆ ಮೀಸಲಾತಿ ದೊರಕಿಸಿಕೊಡುವುದರಲ್ಲಿ ನನ್ನ ಪಾತ್ರ ಮುಖ್ಯವಾಗಿದೆ. ಗ್ರಾಮೀಣ ಬ್ಯಾಂಕ್‌ಗಳಲ್ಲೂ ಕನ್ನಡಿಗರಿಗೆ ಮೀಸಲಾತಿ ಕೊಡಿಸುವ ಬಗ್ಗೆ ಹೋರಾಟ ಕೂಡ ನಡೆದಿದೆ. ಅದರ ಭಾಗವಾಗಿ ಕನ್ನಡದಲ್ಲಿ ಪರೀಕ್ಷೆ ಎದುಸಲು ಸರ್ಕಾರ ಅವಕಾಶ ನೀಡಿರುವುದು ನಮ್ಮ ಹೋರಾಟದ ಫಲವಾಗಿದೆ. ಹಾಗಾಗಿ ಕಾಂಗ್ರೆಸ್ ಯಾವತ್ತೂ ಜನಪರ ಕಾಳಜಿ, ಅಭಿವೃದ್ಧಿ ಕೆಲಸಗಳ ಮೂಲಕವೇ ಮತದಾರರಲ್ಲಿ ಮತ ಕೇಳುವ ನೈತಿಕ ಹಕ್ಕನ್ನು ಹೊಂದಿದೆ. ಹಾಗಾಗಿ ಈ ಬಾರಿ ಈ ಕ್ಷೇತ್ರದಿಂದ ನಿವೇದಿತ್ ಆಳ್ವಾರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ನೀವೆಲ್ಲ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯದರ್ಶಿ ಹುಸೇನ್, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಪ್ರಮುಖರಾದ ನಾಗರಾಜ ಮಡಿವಾಳ, ಸುರೇಖಾ ವಾರೇಕರ್, ತಾರಾ ಗೌಡ, ಇತರರು ಉಪಸ್ಥಿತರಿದ್ದರು.