ಕಾರವಾರ: ಐದು ವರ್ಷದಲ್ಲಿ ಮಾಡಿದ ಕೆಲಸ ಹಾಗೂ ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಆತ್ಮತೃಪ್ತಿ ನನಗಿದೆ. ಇನ್ನು ಮುಂದೆಯೂ ಇನ್ನಷ್ಟು ಅಭಿವೃದ್ಧಿ ಸಾಧಿಸುವ ವಿಶ್ವಾಸ ಇದೆ ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಹೇಳಿದರು.
ತಾಲ್ಲೂಕಿನ ಕದ್ರಾ, ಘಾಡಸಾಯಿ ಹಾಗೂ ಅಸ್ನೋಟಿ ಭಾಗದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು. ಭಾರತೀಯ ಜನತಾ ಪಕ್ಷ ಎರಡನೇ ಬಾರಿಗೆ ನನಗೆ ನೀಡಿರುವ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂಬ ಆತ್ಮವಿಶ್ವಾಸ ಇದೆ. ಐದು ವರ್ಷದ ಅವಧಿಯಲ್ಲಿ ನನಗೆ ಆಶೀರ್ವದಿಸಿದ ಕ್ಷೇತ್ರದ ಜನರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಕಷ್ಟದ ಸಂದರ್ಭದಲ್ಲಿ ಅವರೊಂದಿಗೆ ನಿಂತಿದ್ದೇನೆ. ಮುಂದೆಯೂ ಕೂಡ ಅವರೊಂದಿಗೆ ಇರುತ್ತೇನೆ ಎಂದರು.
ನಾನು ಮಾಡಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿವೆ. ಕ್ಷೇತ್ರದ ಜನತೆ ಅದರ ಪ್ರಯೋಜನ ಆಗುತ್ತಿದೆ. ಇನ್ನೂ ಅನೇಕ ಜನಾನುರಾಗಿ ಯೋಜನೆಗಳನ್ನು ರೂಪಿಸಲಾಗಿದೆ ಆ ಯೋಜನೆಗಳು ಜಾರಿಗೆ ಬರಲು ನಾನು ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದ ಪಡೆಯಬೇಕಾಗಿದೆ. ಕಾರಣ ತಾವೆಲ್ಲರೂ ಭಾರತೀಯ ಜನತಾ ಪಕ್ಷದ ಕಮಲ ಚಿಹ್ನೆಗೆ ಮತ ನೀಡುವಂತೆ ವಿನಂತಿಸಿದರು.
ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ ಮಾತನಾಡಿ, ಡಬಲ್ ಇಂಜಿನ್ ಸರ್ಕಾರದ ಸಾಧನೆ ಅಪಾರ. ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ ರೂಪಾಲಿ ನಾಯ್ಕ ಅವರು ಕ್ಷೇತ್ರದ ಜನರಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಮಾಡಲು ಮೇ 10 ಚುನಾವಣೆಯ ಮತದಾನದಂದು ಕಮಲದ ಗುರುತಿಗೆ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಗೋವಾ ರಾಜ್ಯದ ಶಾಸಕರಾದ ಪ್ರೇಮೇಂದ್ರ ಶೇಟ್, ನಗರಸಭೆ ಉಪಾಧ್ಯಕ್ಷರಾದ ಪಿ.ಪಿ. ನಾಯ್ಕ, ಕಾರವಾರ ಗ್ರಾಮೀಣ ಬಿಜೆಪಿ ಅಧ್ಯಕ್ಷರಾದ ಸುಭಾಷ್ ಗುನಗಿ ಮೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಬಿಜೆಪಿ ಗ್ರಾಮೀಣ ಪ್ರಮುಖರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.