ಕುಮಟಾ: ಪಟ್ಟಣದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ `ರಾಜ್ಯ ಮಟ್ಟದ ಉದ್ಯೋಗ ಮೇಳ’, ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಬೆಳಗಾವಿ ಮಲ್ಲಾಪುರ ನೇಸರಗಿಯ ಗಾಳೇಶ್ವರ ಶಿಕ್ಷಣ ಸಂಸ್ಥೆಯ ಪೂಜ್ಯ ಶ್ರೀ ಚಿದಾನಂದ ಮಹಾಸ್ವಾಮೀಜಿ ನೆರವೇರಿಸಿದರು. ನಂತರ ಮಾತನಾಡಿದ ಶ್ರೀಗಳು, ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ಈ ದೇಶದ ಸಂಪತ್ತು. ಶಿಕ್ಷಕರಿಗೆ ರಾಜ್ಯಾದ್ಯಂತ ಗೌರವ ಇದ್ದು, ಅವರು ಈ ನಾಡಿನ ಹೆಮ್ಮೆ. ಹೀಗಾಗಿ ಶಿಕ್ಷಕರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕಿರಣ್ ಶೇಣಿ ಮಾತನಾಡಿ, ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಸುತ್ತಿರುವ ಇಂತಹ ಯಶಸ್ವಿ ಉದ್ಯೋಗ ಮೇಳದಲ್ಲಿ ಬಂದಂತಹ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಶಿಕ್ಷಕರು ದೊರಕಲಿ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಂಸ್ಥೆಗಳು ದೊರಕಲಿ ಎಂದು ಶುಭ ಹಾರೈಸಿದರು.
ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಭಂಡಾರಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವತ್ತೂ ಆದರ್ಶ ಶಿಕ್ಷಕರನ್ನು ತಯಾರುಗೊಳಿಸುವುದು ನಮ್ಮ ಧೈಯವಾಗಿದೆ. ಇಂತಹ ಮಹಾವಿದ್ಯಾಲಯಗಳ ಶಿಕ್ಷಕರಿಗೆ ಯಾವತ್ತೂ ಬೆಲೆಯಿದೆ. ಇಂದು ಸಮಾಜಕ್ಕೆ ಇಂತ ಶಿಕ್ಷಕರ ಅವಶ್ಯಕತೆ ತುಂಬಾ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ 30 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ 6 ಶಿಕ್ಷಣ ಸಂಸ್ಥೆಗಳಿಗೆ ಅತ್ಯುತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿಯನ್ನು ಪಡೆದವರಿಗೆ ಗಣ್ಯರು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಶಿರಸಿಯ ಕಾಮಧೇನು ಜುವೇಲರಿ ಮಾಲಕ ಪ್ರಕಾಶ್ ಪಾಲನಕರ್, ಸತೀಶ್ ಆರ್ ಮೈಸೂರು, ಹಾಗೂ ಉ.ಕ ಜಿಲ್ಲಾ ಶಿಕ್ಷಕ, ಶಿಕ್ಷಕಿಯರ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಗೌಡ ಉಪಸ್ಥಿತರಿದ್ದರು. ಉದ್ಯೋಗ ಮೇಳದಲ್ಲಿ ರಾಜ್ಯದ 65 ಶಿಕ್ಷಣ ಸಂಸ್ಥೆಗಳು 350 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ 158 ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಉದ್ಯೋಗವನ್ನು ಪಡೆದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಪ್ರಶಿಕ್ಷಣಾರ್ಥಿ ನಾಗಶ್ರೀ ಸಂಗಡಿಗರು ಪ್ರಾರ್ಥಿಸಿದರು. ಭವಾನಿ ಗೌಡ ಅಂಕೋಲಾ ಹಾಗೂ ಡಾರ್ವಿನ್ ಡಯಾಸ್ ಹೊನ್ನಾವರ ಸ್ವಾಗತಿಸಿ, ವಂದಿಸಿದರು.