ದಾಂಡೇಲಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹಿಂದೆ ಮುಂದೆ ಯೋಚಿಸದೆ, ಸರಿಯಾಗಿ ಪರಿಶೀಲಿಸದೇ, ಘೋಟ್ನೇಕರ್ ಅವರ ಪ್ರಚೋದನೆಗೊಳಗಾಗಿ ಬೆಂಗಳೂರಿನ ಜಕ್ಕೂರಿನಲ್ಲಿ ಜಾಗ ಅತಿಕ್ರಮಿಸಿಕೊಂಡು ಬಂಗಲೆ ಕಟ್ಟಿದ್ದೇನೆ ಎಂದು ಆರೋಪ ಮಾಡಿ ನನ್ನ ತೇಜೋವಧೆ ಮಾಡಲು ಹೊರಟಿರುವುದು ಸರಿಯಾದ ನಡೆಯಲ್ಲ. ಈ ಹೇಳಿಕೆಯಿಂದ ನನ್ನ ಮನಸಿಗೆ ತೀವ್ರ ಅಘಾತವಾಗಿದೆ. ಈ ಹೇಳಿಕೆಯನ್ನು ಕೂಡಲೆ ಹಿಂಪಡೆಯದಿದ್ದಲ್ಲಿ ಮಾನನಷ್ಟ ಪ್ರಕರಣ ದಾಖಲಿಸಲಾಗುವುದೆಂದು ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ನಾನು ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಕಳಂಕರಹಿತನಾಗಿ ಆಡಳಿತ ಮಾಡಿರುವುದನ್ನು ಕ್ಷೇತ್ರದ ಜನ ಸಮೀಪದಿಂದ ನೋಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಯನ್ನೆ ಗುರಿಯಾಗಿಸಿಕೊಂಡು ನನ್ನನ್ನು ನಾನು ತೊಡಗಿಸಿಕೊಂಡವನು. ನಾನು ಕಳೆದ 40 ವರ್ಷಗಳಿಂದ ಸತತ ಪರಿಶ್ರಮದಿಂದ ನನ್ನ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದೇನೆ ಎಂದರು.
ನಾನು ನನ್ನ ಜೀವನದಲ್ಲಿ ಒಂದಿಂಚು ಜಾಗ ಅತಿಕ್ರಮಣ ಮಾಡಿದವನಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಬಾಯಿ ಇದೆ ಎಂದು ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಘೋಟ್ನೇಕರ್ ಪ್ರಚೋದನೆಯಿಂದ ಮಾತನಾಡಿದ್ದಾರೆ. ನಾನು ಅತಿಕ್ರಮಣ ಮಾಡಿಕೊಂಡಿದ್ದೇನೆ ಅಂತಾದ್ರೆ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿಯವರು ನನ್ನನ್ನು ಮಂತ್ರಿ ಮಾಡಬಾರದಿತ್ತು. ಘೋಟ್ನೇಕರ್ ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಡುತ್ತಿರುವುದು ಗಮನಕ್ಕೆ ಬಂದಿದೆ. ನಾನು ಸಹ ಅವರ ಬಂಡವಾಳ ಏನು ಎನ್ನುವುದನ್ನು ಜಗಜ್ಜಾಹೀರು ಮಾಡಬೇಕಾಗುತ್ತದೆ ಎಂದು ದೇಶಪಾಂಡೆ ಎಚ್ಚರಿಕೆ ನೀಡಿದರು.