ಹೊನ್ನಾವರ: ನನ್ನನ್ನ ಶಾಸಕನಾಗಿ ಆಯ್ಕೆ ಮಾಡಿದರೆ ಆರು ತಿಂಗಳಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿಗಳನ್ನ ಕರೆದುಕೊಂಡು ಬಂದು ಶಿಲಾನ್ಯಾಸ ಮಾಡಿಸುತ್ತೇನೆ, ಈ ಮಾತಿಗೆ ಯಾವುದೇ ಕಾರಣಕ್ಕೂ ತಪ್ಪುವುದಿಲ್ಲ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಹೇಳಿದರು.
ಪಟ್ಟಣದ ಸೆಂಟ್ ಅಂಥೋನಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಶಾಸಕನಾದರೆ ಮಾಡುವ ಕೆಲಸ ನಿಮಗೆ ಉಪಕಾರವಲ್ಲ. ಅದು ನಿಮ್ಮ ಹಕ್ಕು. ಶಾಸಕರ ಕೆಲಸ ಮನೆಯಲ್ಲಿ ಕುಳಿತು ಗುತ್ತಿಗೆದಾರರ ಜೊತೆ ಚರ್ಚೆ ಮಾಡುವುದಲ್ಲ. ಜನರ ಕೆಲಸವನ್ನ ಪಟ್ಟಿ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಕೆಲಸ ಮಾಡಿಸಿಕೊಂಡು ಬರುವುದು. ನಾನು ಶಾಸಕನಾದರೆ ಜನರ ಸಮಸ್ಯೆ ಪಟ್ಟಿ ಮಾಡಿಕೊಂಡು ಎಲ್ಲರ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ಈ ನಿಟ್ಟಿನಲ್ಲಿ ಕುಮಟಾ ಕ್ಷೇತ್ರಕ್ಕೂ ನನ್ನನ್ನ ಶಾಸಕನಾಗಿ ಆಯ್ಕೆಮಾಡಿ. ಪ್ರಜಾಪ್ರಭುತ್ವದಲ್ಲಿ ಸುಳ್ಳು ಹೇಳುವುದು ಎಲ್ಲರಿಗೂ ರೂಢಿಯಾಗಿದೆ. ಆದರೆ ಈ ಬಾರಿ ಅದನ್ನ ಕಡಿವಾಣ ಹಾಕಲು ಜನರು ಬುದ್ದಿವಂತಿಕೆಯಿಂದ ಮತ ಚಲಾಯಿಸಿ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅತಿ ಹೆಚ್ಚು ಮಹಿಳೆಯರಿಗೆ ಲಾಭವಾಗಲಿದೆ. ಈ ಒಂದು ವಾರದಲ್ಲಿ ಯಾರೇ ತಪ್ಪುದಾರಿ ತೊರಿಸಿದರು ಇದನ್ನ ನಂಬಬೇಡಿ. ಒಂದೊಮ್ಮೆ ತಪ್ಪಾದರೆ ಐದು ವಷÀð ಮಹಿಳೆಯರು ಮನೆಯಲ್ಲಿ ಕಣ್ಣೀರು ಹಾಕುತ್ತಾರೆ. ಈ ನಿಟ್ಟಿನಲ್ಲಿ ಜನರು ಬೆಲೆ ಏರಿಕೆಯಿಂದ ಹೊರ ಬರಲು ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತನ್ನಿ ಎಂದಿದ್ದಾರೆ.
ರಾಜ್ಯದಲ್ಲಿ ನಮ್ಮ ಸಮಿಶ್ರ ಸರ್ಕಾರ ಬಿಳಿಸಿದ್ದು ಯಾರೆಂಬುದು ತಮಗೆ ತಿಳಿದಿದೆ. ಬಿಜೆಪಿ ಸರ್ಕಾರ ರಚಿಸಲು ಏನೆಲ್ಲ ಸರ್ಕಸ್ ಮಾಡಿರುವ ವಿಚಾರವೂ ಜನರಿಗೆ ತಿಳಿದಿದೆ. ನಮ್ಮ ಕುಮಟಾ ಕ್ಷೇತ್ರದಲ್ಲಂತ್ತೂ ಅಭಿವೃದ್ದಿ ಎನ್ನುವುದು ಮರಿಚಿಕೆಯಾಗಿದೆ. ಯುವಕರಿಗೆ ಉದ್ಯೋಗವಿಲ್ಲ. ಎರಡು ಬಾರಿ ಶಾಸಕರಾಗಿ ಮಾಡಿದ ಅಭಿವೃದ್ಧಿಯನ್ನು ನಾನು ಕರಾವಳಿ ಅಭಿವೃದ್ಧಿಯ ಅಧ್ಯಕ್ಷನಾಗಿ ಮಾಡಿದ್ದೇನೆ. ನೀವು ನನನ್ನು ಈ ಕ್ಷೇತ್ರದ ಶಾಸಕನನ್ನಾಗಿಸಿದರೆ, ಖಂಡಿತ ಅಭಿವೃದ್ಧಿ ಚಿತ್ರಣವನ್ನೆ ಬದಲಾಯಿಸುತ್ತೇನೆ.
ನನ್ನ ತಾಯಿ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾರು ಮಾಡಿದ ಕೆಲಸವನ್ನು ನೋಡಿ ಕಲಿತಿದ್ದೇನೆ. ನನಗೆ ದೇವರು ಬೇಕಾದಷ್ಟು ಕೊಟ್ಟಿದ್ದಾನೆ. ಹಾಗಾಗಿ ಯಾವುದೇ ಗುತ್ತಿಗೆದಾರರಿಗೆ ಕಮಿಷನ್ ಕೊಡಿ ಎಂದು ಪೀಡಿಸುವುದಿಲ್ಲ. ಭ್ರಷ್ಟಾಚಾರವನ್ನು ಈ ಕ್ಷೇತ್ರದಿಂದ ದೂರವಿಡುತ್ತೇನೆ. ಹಾಗಾಗಿ ಈ ಬಾರಿ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ನನ್ನು ಬಹುಮತದಿಂದ ಆಯ್ಕೆ ಮಾಡುವಂತೆ ನಿವೇದಿತ್ ಆಳ್ವಾ ವಿನಂತಿಸಿದರು.