ಯಲ್ಲಾಪುರ: ಪ್ರತಿ ಕುಟುಂಬಕ್ಕೆ ಮನೆ ಕಟ್ಟಲು 5 ಲಕ್ಷ ರೂಪಾಯಿ ದೊರೆಯುವುದಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಸಚಿವ ಶಿವರಾಮ ಹೆಬ್ಬಾರ್, ಪಟ್ಟಣದ 6 ಪ್ರದೇಶಗಳನ್ನು ಸ್ಲಮ್ ಬೋರ್ಡಿಗೆ ಸೇರಿಸಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ವಿವೇಕ ಹೆಬ್ಬಾರ ಹೇಳಿದರು.
ಅವರು ಪಟ್ಟಣದ ಉದ್ಯಮನಗರ, ಗಣಪತಿಗಲ್ಲಿ, ತಳ್ಳಿಕೇರಿ ಸೇರಿದಂತೆ ವಿವಿದೆಡೆಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡುತ್ತಿದ್ದರು. ಪಟ್ಟಣ ವ್ಯಾಪ್ತಿಯಲ್ಲಿ ಮೂಲಸೌಲಭ್ಯಗಳಾದ ರಸ್ತೆ, ಚರಂಡಿ ಆಗಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ಕೂಡ ಮಂಜೂರಿಯಾಗಿದೆ. ಮನೆ ಇಲ್ಲದವರಿಗೆ ಹೆಬ್ಬಾರ ನಗರದಲ್ಲಿ ಮನೆ ನೀಡಲಾಗುತ್ತಿದೆ. ಹೀಗೆ ಪಟ್ಟಣದ ಎಲ್ಲ ವರ್ಗದವರಿಗೂ ಪಕ್ಷಾತೀತವಾಗಿ ಸಚಿವರು ಸ್ಪಂದಿಸುತ್ತಾ ಬಂದಿದ್ದಾರೆ. ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಮನೆಗಳಿಗೆ ಹೋಗಿ ಅವರ ಸಮಸ್ಯೆ, ನಿವೇದನೆಯನ್ನು ಕೇಳಿಕೊಂಡು ಪಟ್ಟಣ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿಯ ಚಿತ್ರಣವನ್ನು ತಿಳಿಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಿವರಾಮ ಹೆಬ್ಬಾರರಿಗೆ ಮತ ನೀಡುವಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿ, ಕಾರ್ಮಿಕ ಇಲಾಖೆ ಇಷ್ಟೊಂದು ಬೃಹತ್ತಾದದ್ದು ಎಂಬುದು ಯಾರಿಗೂ ಅರಿವು ಬರಲಿಲ್ಲ. ಈ ಇಲಾಖೆಯ ಮಹತ್ವ ಏನು, ಕಾರ್ಯ ಏನು ಎಂಬುದನ್ನು ಶಿವರಾಮ ಹೆಬ್ಬಾರ ಕಾರ್ಮಿಕ ಸಚಿವರಾದ ಮೇಲೆ ತಿಳಿಯುವಂತಾಯಿತು. ಅಂತಹ ಹೆಬ್ಬಾರರನ್ನು ನಾವೆಲ್ಲ ಬೆಂಬಲಿಸಬೇಕು ಎಂದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಮು ನಾಯ್ಕ, ಪ.ಪಂ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ ಮಾತನಾಡಿದರು, ಪ್ರಮುಖರಾದ ಶಿರೀಷ ಪ್ರಭು, ನಮಿತಾ ಬೀಡಿಕರ್, ಗೀತಾ ನಾಯ್ಕ ಉಪಸ್ಥಿತರಿದ್ದರು. ಬೂತ್ ಸಮಿತಿಯ ಅಧ್ಯಕ್ಷ ಶ್ರೀಪಾದ ಭಟ್ಟ ಸಾತೊಡ್ಡಿ ಇದ್ದರು.