ಕುಮಟಾ: ಹೊನ್ನಾವರ ತಾಲೂಕಿನ ಚಂದಾವರ ಚೆಕ್‌ಪೋಸ್ಟ್ನಲ್ಲಿ ಆಟೋ ಮೂಲಕ ಸಾಗಿಸುತ್ತಿದ್ದ 93.5 ಲಕ್ಷ ರೂ. ವಶಪಡಿಸಿಕೊಂಡ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಹಣದ ವಾರಸುದಾರರ್ಯಾರೆಂಬುದನ್ನು ಬಹಿರಂಗಪಡಿಸಬೇಕೆoದು ಜೆಡಿಎಸ್ ಜಿಲ್ಲಾ ವಕ್ತಾರ ಜಿ.ಕೆ.ಪಟಗಾರ ಆಗ್ರಹಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 93.5 ಲಕ್ಷ ರೂ. ಪತ್ತೆಯಾಗಿರುವುದು ಪ್ರಜ್ಞಾವಂತ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಆಟೋ ಮೂಲಕ ಸಾಗಿಸಲಾಗುತ್ತಿದ್ದ 93.5 ಲಕ್ಷ ರೂ.ಗಳನ್ನು ಚಂದಾವರ ಚೆಕ್‌ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಮೂಲದ ಆಟೋ ಚಾಲಕ ಮತ್ತು ಕಾಗಲ್ ರವಿ ಪಂಡಿತ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಿ, ಬಿಡಲಾಗಿದೆಯಂತೆ.ನಾವು ಈ ಪ್ರಕರಣದ ಬಗ್ಗೆ ಮಾಹಿತಿ ಕೇಳಿದರೆ ತನಿಖೆಯಲ್ಲಿದೆ ಎಂದು ಸಂಬ0ಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಈ ತನಕ ಆ ಹಣ ಯಾರದೆಂಬುವುದು ಬಹಿರಂಗ ಪಡಿಸಿಲ್ಲ. ಚಂದಾವರ ಚೆಕ್ ಪೋಸ್ಟ್ನಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಇದೆ. ಹಣ ಸಿಕ್ಕ 10 ನಿಮಿಷದಲ್ಲಿ ಓರ್ವ ವ್ಯಕ್ತಿ ಘಟನಾ ಸ್ಥಳದಲ್ಲಿದ್ದರು ಎಂಬ ಮಾಹಿತಿ ಇದೆ. ಚುನಾವಣೆಗೋಸ್ಕರ ಲಕ್ಷ ಗಟ್ಟಲೆ ಹಣ ಸಾಗಿಸಲಾಗುತ್ತಿದ್ದ. ಈ ಪ್ರಕರಣದ ಕಿಂಗ್‌ಪಿನ್ ಯಾರು? ಎಂಬುದನ್ನು ಕಂಡುಹಿಡಿಯಲು ಚಂದಾವರ ನಾಕಿಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದರೆ, ಸತ್ಯ ಬಯಲಾಗುತ್ತದೆ. ಹಾಗಾಗಿ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಹಣದ ವಾರಸುದಾರರನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇನ್ನು ಜೆಡಿಎಸ್ ಪ್ರಚಾರದ ಬಗ್ಗೆ ಮಾತನಾಡಿದ ಜೆಡಿಎಸ್ ಜಿಲ್ಲಾ ವಕ್ತಾರ ಜಿ.ಕೆ.ಪಟಗಾರ ಅವರು, ನಾಮಪತ್ರ ಸಲ್ಲಿಸಿದಾಗಿನಿಂದಲೂ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರು ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕ್ಷೇತ್ರದ ಎಲ್ಲೆ ಹೋದರೂ ಸೋನಿ ಅವರಿಗೆ ಮತ್ತು ನಮಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕ್ಷೇತ್ರದಲ್ಲಿ ಬದಲಾವಣೆ ಬೇಕೆಂಬ ಆಗ್ರಹ ಇದೆ. ಎಲ್ಲ ಸಮುದಾಯದವರೂ ಈ ಬಾರಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರನ್ನು ಗೆಲ್ಲಿಸಲು ಪಣತೊಟ್ಟ ವಿಷಯ ನಮಗೆ ಗೆಲ್ಲುವ ಭರವಸೆ ಮೂಡುವಂತಾಗಿದೆ. ಕ್ಷೇತ್ರದ ಜನರ ಸ್ಪಂದನೆ ನೋಡಿ ನಮಗೆಲ್ಲ ಖುಷಿಯಾಗಿದೆ. ಹಾಗಾಗಿ ಈ ಬಾರಿ ಖಂಡಿತ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಡಿಸುವ ಜೊತೆಗೆ ಅತೀ ಹೆಚ್ಚಿನ ಬಹುಮತದಿಂದ ಸೋನಿ ಅವರನ್ನು ಆಯ್ಕೆ ಮಾಡಲು ಕ್ಷೇತ್ರದ ಜನತೆ ಜೆಡಿಎಸ್‌ಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಜಿ.ಹೆಗಡೆ, ತಾ.ಪಂ ಮಾಜಿ ಸದಸ್ಯ ಈಶ್ವರ ನಾಯ್ಕ, ಪ್ರಮುಖರಾದ ಸತೀಶ್ ಮಹಾಲೆ, ದತ್ತು ಪಟಗಾರ, ಅಶ್ವಿನ್ ನಾಯ್ಕ, ಮಂಜುನಾಥ ಜೈನ್, ರೆಹಮತ್, ಎಂ.ಟಿ.ನಾಯ್ಕ, ವಸಂತ ಗೌಡ, ಶಿವರಾಮ ಮಡಿವಾಳ, ಕಿರಣ ರಾಯ್ಕರ್, ಭವಾನಿ ಹಳ್ಳೇರ್, ಹರಿಶ್ಚಂದ್ರ, ವಿ.ಜಿ.ಹೆಗಡೆ ಕಲ್ಲಟ್ಟಿ, ಎಸ್.ಜಿ.ಹೆಗಡೆ, ಜಿ.ಎಂ.ಭಟ್, ಜಿ.ಎಂ.ಹೆಗಡೆ, ನೇತ್ರಾವತಿ ಹೆಗಡೆ, ನವೀನ್ ನಾಯ್ಕ ಇತರರು ಉಪಸ್ಥಿತರಿದ್ದರು.