ತಿಲಕ್ ಗೋಖಲೆ ಭಗತ್ ಬೋಸ್ ಬಾಪೂ ಝಾಂಸಿರೀ ಮಹಾರಾಣಿ
ಜೋಹರ್ ದೇಖ್ ಜವಾನಾ ರೋ ತೂ ಬತಾ ಕಠೇ ಇತರೋ ಪಾಣಿ
ಗೀತಾ ರೋ ಉಪದೇಶ್ ಕರ್ಮ ಸಂದೇಶ್ ಕೃಷ್ಣ ಸಾ ಸಾರಥೀ
ಆಜ್ ಭರತ್ ರಿ ಧರಾ ವಿಶ್ವ ಲಲಕಾರತೀ ಬೊಲೋ ಜೈ ಜೈಕಾರ್ ಉತಾರೋ ಆರತೀ
ಬುದ್ಧ ಮಹಾವೀರರ ಈ ಶಾಂತಿ ಭೂಮಿಯಲ್ಲಿ ಯಾವ ಯಾವಾಗ ಯುದ್ಧವಾಯಿತೋ ಆಗ ಅರ್ಜುನರೂಪಿ ವೀರರ ಬಾಣಗಳು ಪರಾಕ್ರಮದ ಮಳೆಗರೆದಿವೆ. ಅಧರ್ಮಿಗಳ ವಿನಾಶಗೈಯಲಾಗಿದೆ. ಕ್ಷಮೆ ಎಂಬುದು ವಿಷ ಉಳ್ಳ ಹಾವಿಗೆ ಮಾತ್ರವೇ ಶೋಭಿಸುತ್ತದೆ ಹೊರತು ಹಲ್ಲಿರದ,ವಿಷವಿರದ ದಂತಹೀನ ಸಾದಾ ಹಾವಿಗಲ್ಲ. ಈ ದೇಶದಲ್ಲಿ ಶಸ್ತ್ರ ಹಾಗೂ ಶಾಸ್ತ್ರ ಎರಡಕ್ಕೂ ಪೂಜನೀಯ ಸ್ಥಾನವಿದೆ. ವಿನೀತ ಭಾವನೆಯನ್ನು ಭಾರತ ಜಗತ್ತಿಗೇ ಕಲಿಸಿದೆ. ಒಂದು ಕಡೆ ವಿದ್ಯಾಧಿವತೆ ಸರಸ್ವತಿ ಇದ್ದರೆ, ದುಷ್ಟ ಸಂಹಾರವೂ ಬೇಕೆನ್ನುವ ದುರ್ಗೆಯ ಆರಾಧನೆಯೂ ಇದೆ.
ಹೀಗಿರುವಾಗ ಅಧರ್ಮಿಯೋರ್ವ ಭಾರತ ಮಾತೆಯನ್ನು ಆಕ್ರಮಿಸಲು ಬಂದಾಗ ಬಿಡುವುದುಂಟೇ? ಮಣ್ಣು ಮುಕ್ಕಿಸಿಬಿಡುವುದೇ. ಅದಕ್ಕೆಂದೇ ನಮ್ಮ ವೀರಯೋಧರು ಸದಾ ಸಿದ್ಧರಿದ್ದಾರೆ. ಅದು ಭಾರತ ಎರಡನೇಯ ಬಾರಿ ಸಫಲವಾಗಿ ಪರಮಾಣು ಪರೀಕ್ಷೆ ನಡೆಸಿದ ಸಮಯ. ದೇಶದ ಜನ ಸಂಭ್ರಮಿಸುತ್ತಿದ್ದರು. ಜಗತ್ತು ನಿಬ್ಬೆರಗಾಗಿತ್ತು. ಆದರೆ ಬಗಲಲ್ಲಿರುವ ಪರದೇಶ ಹಲ್ಲು ಕಟೆಯುತ್ತಿತ್ತು. ಬಾಹ್ಯ ಶಕ್ತಿಗಳ ನೆರವಿನಿಂದ ತಾನೂ ಪರಮಾಣು ಶಕ್ತಿಶಾಲಿ ಎಂದು ತಿಳಿದಿತ್ತು. ನೇರಯುದ್ಧದಲ್ಲಿ ಮೂರು ಬಾರಿ ಮಣ್ಣುಮುಕ್ಕಿದರೂ ಬುದ್ಧಿ ಬಂದಿರಲಿಲ್ಲ. ಮತ್ತೆ ಕಾಲುಕೆರೆಯುತ್ತಿತ್ತು.
ತೀವ್ರ ಚಳಿಗಾಲದಲ್ಲಿ ಭಾರತೀಯ ಸೈನಿಕರು ದುರ್ಗಮ ಎತ್ತರದ ಗಡಿಯ ಪರ್ವತ ಪ್ರದೇಶವನ್ನು ಕಾಯದೆ ಖಾಲಿ ಬಿಡುತ್ತಿದ್ದರು. ಚಳಿಗಾಲದ ನಂತರ ಮತ್ತೆ ಠಿಕಾಣಿ ಹೂಡಿ ಕಾಯುತ್ತಿದ್ದರು. ಇದೇ ಅವಕಾಶ ಎಂದು ಕೊಂಡು ಪಾಕ್ ಸೇನೆ ಮೊದಲು ಕಾರ್ಗಿಲ್, ಸಿಯಾಚಿನ್, ನಂತರ ಲಡಾಕ್ ಅನ್ನು ಅಂತರಾಷ್ಟ್ರೀಯ ಗಡಿಯಾಗಿಸಿ ತನ್ನೊಳಗೆ ಸೇರಿಸಿಕೊಳ್ಳುವ ಕನಸು ಕಾಣುತ್ತಿತ್ತು.
ತನ್ನ ಗಡಿಯೊಳಗೆ ಕಾದಾಡುವ ಪ್ರಸಂಗ ಭಾರತಕ್ಕೆ ಆಗ ಎದುರಾಯಿತು. ಮೇಲಾಗಿ ಆತಂಕ ವೆಂದರೆ ಗಡಿ ದಾಟಿದರೆ ಪಾಕಿಸ್ತಾನದ ಪರಮಾಣು ಯುದ್ಧದ ಬೆದರಿಕೆ. ಭಾರತಕ್ಕೆ ಇದು ಅರ್ಥವಾಗಿತ್ತು ಮತ್ತು ಯಾವ ಸಂದರ್ಭದಲ್ಲಲೂ ಗಡಿಯನ್ನು ಅತಿಕ್ರಮಿಸಬಾರದು ಎಂದು ನಿರ್ಧಾರ ಮಾಡಿತ್ತು. ಜೊತೆಗೆ ವಿರೋಧಿಗಳನ್ನ ಅವರ ಗಡಿಯೊಳಗೇ ಮರಳಿ ಕಳಿಸುವ ಬದ್ಧತೆಯನ್ನು ತೋರಿಸಬೇಕಿತ್ತು. ಸೇನೆಗೆ ಆದೇಶವಿತ್ತರು. ಸೈನಿಕರು ತಯಾರಿದ್ದರು.
ಆಗ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಗೋರ್ಖಾ ರೈಫಲ್ಸನ ನೇತೃತ್ವ ವಹಿಸಿದ್ದರು. ಇವರು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯವರು. ಓದಿಗಾಗಿ ಕುಟುಂಬ ಸಹಿತ ಲಖನೌ ಸೇರಿದವರು. ಸೈನಿಕ ಶಾಲೆಯಲ್ಲಿ ಕಲಿತ ನಂತರ ಅವರಲ್ಲಿ ಅದಮ್ಯ ದೇಶಭಕ್ತಿ ತುಡಿಯುತ್ತಿತ್ತು. ಎನ್ಡಿಎ ಸೇರುವ ಮುನ್ನ ತಾಯಿಯ ವಾತ್ಸಲ್ಯ ತಡೆದರೂ ದೇಶಸೇವೆಗೆ ಹಿಂದೇಟು ಹಾಕಲಿಲ್ಲ. ಏಕೆಂದರೆ ಸ್ವತಃ ತಾಯಿಯೇ ಭಗತ್ ಸಿಂಗ್ ಮೊದಲಾದ ವೀರರ ಕಥೆ ಕೇಳಿಸಿದ್ದರು ಎಂದು ಮನೋಜ್ ತಮ್ಮ ಅಮ್ಮನ ಮನವೊಲಿಸಿದರು ಕೂಡಾ.
ಸೇನೆಗೆ ಸೇರುವ ಸಮಯದಲ್ಲಿ ಅವರಿಗೆ , ” ನೀನ್ಯಾಕೆ ಸೈನ್ಯ ಸೇರುತ್ತೀಯ?” ಎಂದು ಕೇಳಿದಾಗ ಮನೋಜ್ ಕುಮಾರ್ ಉತ್ತರ ” ಪರಮವೀರ ಚಕ್ರ ಪಡೆಯಬೇಕು ” ಎಂದು.
ಎಲ್ಲಿವರೆಗೆ ಹನಿ ರಕ್ತವಿರುತ್ತದೋ ಅಲ್ಲಿವರೆಗೆ ಸಾವೂ ಸನಿಹ ಬರದು ಎಂಬ ಕೆಚ್ಚೆದೆ ಅವರದ್ದು. ಒಂದು ವೇಳೆ ಸಾವೇ ಬಂದರೂ ಅದನ್ನು ಸಾಯಿಸಿಬಿಡುವೆ ಎಂದಿದ್ದರು. ” ಜೈ ಮಾ ಕಾಳಿ, ಆಯೋ ಗೋರ್ಖಾಲಿ ” ಇದು ಗೋರ್ಖಾ ರೈಫಲ್ಸ್ನ ಘೋಷವಾಕ್ಯ.
ಗೋರ್ಖ ರೈಫಲ್ಸ್ ಎಂದರೆ ಸಸಾರವಲ್ಲ. ತನಗೆ ಗೋರ್ಖಾ ಪಡೆ ಸಿಕ್ಕರೆ ಜಗತ್ತನ್ನೇ ಗೆಲ್ಲುವೆ ಎಂದು ಹಿಟ್ಲರ್ ನಂತಹ ಸೇನಾನಿ ಹೇಳಿದ್ದ ಎಂದು ನೆನಪಿಸುತ್ತ, ಶತ್ರುಗಳು ನಮ್ಮ ನೆಲಕ್ಕೆ ದಾಂಗುಡಿ ಇಟ್ಟಿದ್ದಾರೆ ನಮ್ಮ ಹಿರಿಕರ ಆಣೆಯಾಗಿ ಶತ್ರುಗಳನ್ನು ಸದೆ ಬಡಿಯೋಣ ಎಂದರು. ಇದು ಕಾದ ಸಮಯ ಜಯ ನಮ್ಮದೇ ಎನ್ಬುತ್ತ ಜೈ ಮಾ ಕಾಳಿ ಆಯೋ ಗೋರ್ಖಾಲಿ ಎಂದು ವೀರಘೋಷ ಮೊಳಗಿಸಿದರು.
ಮೊದಲು ಅವರು ಜುಬಾರ್ ಟಾಪ್ ಅನ್ನು ಮುಕ್ತಗೊಳಿಸಿದರು. ಇದು ಆರಂಭ ಮಾತ್ರವಷ್ಟೇ.
ಜುಲೈ 3,1999 ಅಂದು ಖಾಲುಬರ್ ಅನ್ನು ವಶಮಾಡಿಕೊಳ್ಳುವ ಆದೇಶ ಬರುತ್ತದೆ. ಕೆಲಸ ಸುಲಭದ್ದೇನು ಆಗಿದ್ದಿಲ್ಲ. ಕಣಿವೆ ಕಂದರಗಳು, ಜೊತೆಯಿರುವ ಸೈನಿಕ ಪಡೆಯೂ ಚಿಕ್ಕದು. ನಿಜಕ್ಕೂ ಇದು ಆತ್ಮಘಾತುಕವೇ ಆಗಿತ್ತು. ಅವರು ಎಲ್ಲದಕ್ಕೂ ಸಜ್ಜಾದ ಯೋಧರು ಮುನ್ನಡೆದೇ ಬಿಟ್ಟರು. ವೈರಿಗಳ ದಾಳಿ ಭರ್ಜರಿಯಾಗೇ ಆಗಿತ್ತು. ಇತ್ತಲಿಂದಲೂ ಉತ್ತರ ಹೋಗಿತ್ತು. ಎಲ್ಲೆಲ್ಲೂ ಢಂ ಢಮಾರ್ ಗುಂಡಿನ ದಾಳಿ. ನಾಲ್ಕು ಕಡೆಯ ಪರ್ವತಾಗ್ರದಲ್ಲಿ ಬಂಕರ್ಗಳಿಂದ ದಾಳಿ ಅಕ್ಷರಶಃ ಬೆಂಕಿ ಮಳೆಯೆ ಸುರಿದಿತ್ತು. ಹಾಗಾಗಿ ಆ ಬಂಕರ್ಗಳನ್ನು ನಾಶ ಮಾಡುವುದು ಬಹಳ ಮುಖ್ಯ ವಾಗಿತ್ತು.
ಹವಾಲ್ದಾರ್ ಭೀಮ್ ಬಹಾದೂರ್ ಅವರು ತುಕಡಿಗಳನ್ನು ಬಲಗಡೆಯ ಎರಡು ಬಂಕರ್ ಧ್ವಂಸ ಮಾಡಲು ಕಳಿಸಿದರು. ಎಡಬದಿಯ ನಾಲ್ಕು ಬಂಕರ್ ನಾಶಕ್ಕೆ ಸ್ವತಃ ಮುಂದಾದರು ಕ್ಯಾಪ್ಟನ್ ಪಾಂಡೆ. ಒಂದೇ ಬಾರಿಗೆ ನಾಲ್ಕು ಸೈನಿಕರನ್ನು ಅವರು ಹೊಡೆದುರುಳಿಸಿದರು. ಒಂದು ಎರಡು ಹಾಗೂ ಮೂರು ಬಂಕರುಗಳನ್ನು ಧ್ವಂಸಗೊಳಿಸಿದರು.ಅಷ್ಟೊತ್ತಿಗಾಗಲೇ ಕಾಲಿಗೆ, ಮೈಗೆಲ್ಲ ಗುಂಡು ನೆಟ್ಟಿತ್ತು. ಆದರೆ ಚಿತ್ತ ಮಾತ್ರ ನಾಲ್ಕನೇ ಬಂಕರ್ ನತ್ತ. ಬಿಡಲಾರೆ ನಾನು ಎಂಬ ಒಂದೇ ಹಠ ಛಲ.
ಹಿಂದಿಯಲ್ಲಿ ಹೇಳುವ ಹಾಗೆ ‘ ದರ್ದ್ ಥಾ ಲೆಕಿನ್ ವೊ ಮರ್ದ್ ಥಾ. ಔರ್ ಮರ್ದ್ ಕೋ ದರ್ದ್ ನಹಿ ಹೋತಾ’.
ನಾಲ್ಕನೇ ಬಂಕರ್ ಕಡೆಯೂ ದಾಳಿಗೆ ಹೊರಟೇ ಬಿಟ್ಟರು. ಬಾಂಬ್ ಎಸೆದರು. ಅದು ತಪ್ಪದೇ ಗುರಿ ಮುಟ್ಟಿತ್ತು. ಅದೇ ಸಮಯಕ್ಕೆ ನಾಲ್ಕು ಎಂ ಎಂನ ಗುಂಡೊಂದು ಮನೋಜ್ ಪಾಂಡೆಯ ತಲೆಗೆ ಹೊಕ್ಕಿಬಿಟ್ಟಿತ್ತು. ಕ್ಯಾಪ್ಟನ್ ಮನೋಜ್ ಪಾಂಡೆ ಹುತಾತ್ಮರಾದರು.
ಹತ್ತೊಂಬರ್ ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಹೆಚ್ಚು ಕಾಲ ಯುದ್ದ ಮಾಡಿದ ಮೊದಲ ಸೈನಿಕರೆಂಬ ಖ್ಯಾತಿ ಅವರದ್ದಾಯಿತು. ಕಾರ್ಗಿಲ್ ಯುದ್ಧದಲ್ಲಿ ಬಟಾಲಿಯನ್ ಆಗಿ ಕಠಿಣ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಿದರು. ಕೊಟ್ಟ ಕೆಲಸ ಮುಗಿಸಿ ನಗುನಗುತ್ತ ತೆರಳಿಬಿಟ್ಟರು. ದೇಶಪ್ರೇಮವೂ ಇತ್ತು ಹೆಮ್ಮೆಯೂವೂ ಇತ್ತು. ಕೊನೆಯಲ್ಲಿ ಅವರ ಕನಸೂ ನನಸಾಯಿತು ಅವರಿಗೆ ಪರಮ ವೀರ ಚಕ್ರ ಪ್ರಾಪ್ತವಾಯಿತು.
ಹಂಗು ತೊರೆದು ಹೋರಾಡುವ ಇಂಥಹ ವೀರರನ್ನು ಕಂಡಾಗ ಭಗವದ್ಗೀತೆಯ ಶ್ಲೋಕ ನೆನಪಾಗುತ್ತದೆ.
ನೈನಂ ಛಿಂದಂತಿ ಶಸ್ತ್ರಾಣಿ ನ ದಹತ್ಯೇವ ಪಾವಕಃ |
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ||
ಅಂದರೆ ಶಸ್ತ್ರ ಘಾಸಿ ಮಾಡಲಾಗದ್ದು, ಬೆಂಕಿಯೂ ಸುಡುವುದಿಲ್ಲ. ನೀರು ಇದನ್ನು ಒದ್ದೆ ಮಾಡಲಾಗದು, ಗಾಳಿಯು ಇದನ್ನು ಒಣಗಿಸದು.
ಜೈ ಹಿಂದ್.
ಜೈ ಜವಾನ್.