ಸಿದ್ದಾಪುರ: ಗ್ರಾಮೀಣ ಪ್ರದೇಶದಲ್ಲಿನ ಜಲ ಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಪಡಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಳೆಗಾಲ ಆರಂಭಕ್ಕೂ ಮೊದಲೇ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ತಾಲೂಕಿನ ಬಿಳಗಿ ಗ್ರಾಮ ಪಂಚಾಯತ್‌ನ ಹೊಸ ಮಂಜು ಗ್ರಾಮದ ದಾಸನಗದ್ದೆ ಶಿಬಳೆ ಕೆರೆಯಲ್ಲಿ ಬುಧವಾರ ಹೂಳೆತ್ತುವ ಕಾರ್ಯ ನಡೆಯಿತು. ಕಳೆದ ಮೂರು ವಾರಗಳಿಂದ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಸುಮಾರು 79 ಮಾನವ ದಿನಗಳ ಸೃಜನೆಯಾಗಿದೆ. ಸುಮಾರು 10 ಲಕ್ಷ ವೆಚ್ಚದಲ್ಲಿ ಕೆರೆ ಹೂಳೆತ್ತುವುದು, ಪಿಚ್ಚಿಂಗ್, ಕೋಡಿ ನಿರ್ಮಾಣ ಮಾಡಲಾಗುತ್ತಿದ್ದು, ಕೆರೆಯ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿದೆ.
ಇನ್ನು ಕೆರೆ ನಿರ್ಮಾಣದಲ್ಲಿ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಗುಣಮಟ್ಟದ ಕಾಮಗಾರಿ ನೀಡುವಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಗ್ರಾಮದ ಪಕ್ಕದಲ್ಲಿಯೇ ಕೆರೆ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಜೊತೆಗೆ ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಸೂಕ್ತವಾಗಿದೆ. ಕೆರೆ ನೀರಿನಿಂದ ನೂರಾರು ರೈತರ ಹೊಲಗದ್ದೆ, ಕೃಷಿ ಭೂಮಿಗೆ ನೀರು ಪೂರೈಕೆಯಾಗುವಂತಿದೆ. ಸ್ಥಳೀಯರು ಮೀನು ಸಾಕಾಣಿಕೆ ಕೈಗೊಳ್ಳಲು ಯೋಜನೆ ರೂಪಿಸಿದ್ದಾರೆ. ಕೂಲಿಕಾರರು ಕೆರೆಗಳ ಅಭಿವೃದ್ಧಿಯ ಉದ್ದೇಶವನ್ನರಿತು ಕೆಲಸ ನಿರ್ವಹಿಸಬೇಕು ಅಂದಾಗಲೇ ನಿಮ್ಮ ಊರಿನ ಅಭಿವೃದ್ಧಿ, ಕೆಲಸದ ಉದ್ದೇಶ ಮತ್ತು ಸಾಧನೆ ಸಾರ್ಥಕವಾಗುತ್ತದೆ ಎಂಬುದನ್ನು ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ತಿಳಿಸಿದರು.
ಕೂಲಿಕಾರರು ದಿನವೊಂದಕ್ಕೆ ಎಷ್ಟು ಪ್ರಮಾಣದ ಕೆಲಸ ನಿರ್ವಹಿಸಬೇಕು, ಅದರಿಂದಾಗುವ ಅನುಕೂಲ, ಅಳತೆಯ ಪ್ರಕಾರ ಕಾರ್ಯ ನಿರ್ವಹಿಸದಿದ್ದಲ್ಲಿ ಉಂಟಾಗುವ ತೊಂದರೆಗಳ ಕುರಿತು ತಾಲೂಕು ತಾಂತ್ರಿಕ ಸಂಯೋಜಕ ಜಿ.ಪಿ ಮಂಜುನಾಥ ವಿವರಿಸಿದರು. ಈ ವೇಳೆ ಗ್ರಾಮ ಪಂಚಾಯತ ಕಾರ್ಯದರ್ಶಿ ವೆಂಕಟಗಿರಿ ಗೌಡ, ಹಾಗೂ ಸಿಬ್ಬಂದಿ ವಸಂತ ಮಡಿವಾಳ ಇದ್ದರು.