ಕುಮಟಾ: ನನ್ನನ್ನ ಜನರು ಈ ಬಾರಿ ಶಾಸಕನಾಗಿ ಮಾಡಿದರೆ ಕ್ಷೇತ್ರದಲ್ಲಿ ಆರು ತಿಂಗಳ ಒಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಿಸಿಕೊಡುತ್ತೇನೆ ಎಂದು ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಹೇಳಿದರು.
ತಾಲೂಕಿನ ಗೋಕರ್ಣ ಹಾಗೂ ಬರ್ಗಿ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ಪ್ರಚಾರ ನಡೆಸಿ ತಮ್ಮ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆ ಕೇವಲ ಗೋಕರ್ಣ ಕುಮಟಾ ಹಾಗೂ ಹೊನ್ನಾವರದ ಭವಿಷ್ಯವಲ್ಲ. ಇಡೀ ರಾಜ್ಯದ ಭವಿಷ್ಯವಾಗಿದೆ. 5 ವರ್ಷದ ಹಿಂದೆ ಸ್ಪಷ್ಟ ಬಹುಮತ ಬರದೇ ಇದ್ದ ಕಾರಣ ಸಮ್ಮಿಶ್ರ ಸರ್ಕಾರ ಹೇಗೆ ಬಂದಿದೆ ಎನ್ನುವುದು ಎಲ್ಲರಿಗೂ ತಿಳಿದಿದ. ಇದಾದ ನಂತರ ರಾಜ್ಯದಲ್ಲಿ ಬಂದ ಬಿಜೆಪಿ ಸರ್ಕಾರ ಎಷ್ಟು ಜನರಿಗೆ ಸಮಸ್ಯೆ, ಭ್ರಷ್ಟಾಚಾರವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.
ಕರ್ನಾಟಕದ ಇತಿಹಾಸದಲ್ಲಿ ಬಿಜೆಪಿ ಸರ್ಕಾರದಷ್ಟು ಭ್ರಷ್ಟ ಸರ್ಕಾರ ಎಂದು ನಾವು ನೋಡಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಸ್ವತಹ ಕಾಮಗಾರಿಗಳನ್ನ ಮಾಡುವ ಗುತ್ತಿಗೆದಾರರೇ ಹೀಗೆ ಹೇಳಿ ಪ್ರಧಾನಿಗೆ ಸಹ ಪತ್ರ ಬರದಿದ್ದಾರೆ. ಮನೆಯ ಯಜಮಾನ ಕೆಲಸ ಮಾಡಲು ಆಗದಂತಹ ಪರಿಸ್ಥಿತಿ ಬಿಜೆಪಿ ಸರ್ಕಾರದಿಂದ ಬಂದಿದೆ. ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಮುಖಗಳಿದ್ದಂತೆ ಎಂದು ಕಿಡಿಕಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಹತ್ತು ಹಲವು ಅಭಿವೃದ್ದಿ ಚಟುವಟಿಕೆಗಳನ್ನ ಮಾಡಲಾಗಿತ್ತು. ಹಸಿದವರಿಗೆ ಅನ್ನ ನೀಡುವ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಮಾಡಿದರೆ ಬಿಜೆಪಿ ಇದನ್ನ ಕಿತ್ತುಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ಬಿಜೆಪಿ ಸರ್ಕಾರ ಬಡವರ, ಮಧ್ಯಮ ವರ್ಗದವರ ಸರ್ಕಾರವಲ್ಲ. ಬೆಲೆ ಏರಿಕೆ ಮೂಲಕ ಜನರನ್ನ ಕಷ್ಟಕ್ಕೆ ಸಿಲುಕಿಸುವ ಸರ್ಕಾರ ಬಿಜೆಪಿ ಸರ್ಕಾರ ಎಂದರು.
ಕುಮಟಾ ಶಾಸಕರು ಐದು ವರ್ಷದಲ್ಲಿ ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರೋಧಿ ಅಲೆಯಿದ್ದು ಜನರು ಜೆಡಿಎಸ್ ಬಿಜೆಪಿಗೆ ಮತ ಹಾಕದೇ ಕಾಂಗ್ರೆಸ್ ಗೆ ಬೆಂಬಲಿಸುವ ವಿಶ್ವಾಸವಿದೆ. ಬಿಜೆಪಿ ಶಾಸಕರು ಕಾಂಗ್ರೆಸ್ ಪ್ರತಿನಿಧಿಗಳಿರುವ ಕ್ಷೇತ್ರದಲ್ಲಿ ಅನುಧಾನ ಬಿಡುಗಡೆ ಮಾಡದೇ ನಿರರ್ಲಕ್ಷ ವಹಿಸಿದ್ದರು ಎಂದರು. ಕುಮಟಾ ಕ್ಷೇತ್ರದ ಯಾವ ಭಾಗದಲ್ಲಿ ಹೋದರು ಜನರು ನಾನಾ ಸಮಸ್ಯೆಗಳನ್ನ ಹೇಳುತ್ತಾರೆ. ಕ್ಷೇತ್ರದಲ್ಲಿ ಸರಿಯಾದ ಚರಂಡಿ, ರಸ್ತೆ ವ್ಯವಸ್ಥೆ ಮಾಡಿಲ್ಲ. ಕುಡಿಯುವ ನೀರು, ರಸ್ತೆಗೆ ವಿದ್ಯುತ್ ವ್ಯವಸ್ಥೆ ಸರಿಯಾಗಿ ಮಾಡದೇ ಜನರು ಪರದಾಟ ಮಾಡುತ್ತಾರೆ. ಅಭಿವೃದ್ದಿ ಮಾಡದ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ಉತ್ತರ ಕೊಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೇದಿತ್ ಅವರ ಪತ್ನಿ ಮೀರಾ ಆಳ್ವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಸಾಯಿ ಗಾಂಕರ್, ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ನಾಯಕ, ಮಹಿಳಾ ಬ್ಲಾಕ್ ಅಧ್ಯಕ್ಷರಾದ ಸುರೇಖಾ ವಾರೇಕರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರದೀಪ್ ದೇವರಬಾವಿ, ಗಾಯತ್ರಿ ಗೌಡ, ಪ್ರಮುಖರಾದ ವೆಂಕಟ್ರಮಣ ಪಟಗಾರ್, ವಾಮನ ಪಟಗಾರ್, ಸಬಾರ್ ಸಾಬ್, ಅಬ್ಬಾಸ್ ಸಾಬ್, ಚಿದಂಬರ ಪಟಗಾರ್, ಜಯರಾಮ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.