ಅಂಕೋಲಾ: ನುಡಿದಂತೆ ನಡೆದು ಸಿಕ್ಕ ಅವಕಾಶದಲ್ಲಿ ಜನರಿಗೆ ಅವಶ್ಯಕವಾಗಿರುವ ಕೆಲಸಗಳನ್ನು ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.
ತಾಲ್ಲೂಕಿನ ವಂದಿಗೆ, ಬೆಳಸೆ ಹಾಗೂ ಮೊಗಟಾ ಭಾಗದಲ್ಲಿ ಪ್ರಚಾರ ನಡೆಸಿ ಮತಯಾಚನೆ ಮಾಡಿ ಅವರು ಮಾತನಾಡಿ,ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನ ಸರಕಾರದ ಮಟ್ಟದಲ್ಲಿ ನಡೆದಿದೆ. ಅದನ್ನು ಮುಂದಿನ ದಿನದಲ್ಲಿ ಮಾಡಿಯೇ ತೀರುತ್ತೇನೆ. ಆದರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಾಲಕ್ಕಿ ಸಮುದಾಯದ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನ ಕೂಡ ಮಾಡದೇ ಇದ್ದಿದ್ದು ದುಃಖ ಉಂಟುಮಾಡಿದೆ ಎಂದರು.
ಕಳೆದ 20 ವರ್ಷಗಳಿಂದ ರಾಜಕೀಯವಾಗಿ ಜನಸೇವೆಯಲ್ಲಿ ತೊಡಗಿದ್ದು ಎಲ್ಲಿಯೂ ಆತ್ಮಸಾಕ್ಷಿಗೆ ಧಕ್ಕೆ ಬರುವಂತಹ ಕೆಲಸ ಮಾಡಿಲ್ಲ. ಭಾರತೀಯ ಜನತಾ ಪಕ್ಷದ ನಾಯಕರು ಅಭಿವೃದ್ಧಿ, ಪಕ್ಷ ಬೆಳೆಯಲು ಸಹಕರಿಸಿದ ರೀತಿ, ಜನರ ನಡುವಿನ ಸಂಬಂಧದ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದರು.
ವಿರೋಧ ಪಕ್ಷದ ನಾಯಕರು ಡಬಲ್ ಇಂಜಿನ್ ಸರಕಾರವಿದ್ದೂ ಅಭಿವೃದ್ಧಿ ಆಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೂ ಸಹ ಡಬಲ್ ಇಂಜಿನ್ ಸರಕಾರ ಇತ್ತು ಆಗ ಮಾಡಲು ಸಾಧ್ಯವಾಗದ್ದನ್ನು ಬಿಜೆಪಿ ಸರಕಾರ ಮಾಡುತ್ತಿರುವುದನ್ನು ನೋಡಿ ಸಹಿಸಲಾಗುತ್ತಿಲ್ಲ. ಅಂಕೋಲಾ ನಗರದ ಚಿತ್ರಣ ಬದಲಿಸುವುದು ನನ್ನ ಕನಸಾಗಿತ್ತು ಅಂತೆಯೇ ಅಂಕೋಲಾ ನಗರ ದ್ವಿಪಥ ರಸ್ತೆ ಹಾಗೂ ಬೀದಿ ದೀಪಗಳಿಂದ ಕಂಗೊಳಿಸುತ್ತಿದೆ. ಹೀಗೆ ಬೇರೆ ಬೇರೆ ಕೆಲಸಗಳನ್ನು ಮಾಡಿದ್ದೇನೆ ಎಂದರು.
ಸಮ್ಮಿಶ್ರ ಸರಕಾರ, ಪ್ರವಾಹ, ಕೊರೋನಾಗಳಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿತು. ದೇವಿಗದ್ದೆಯಲ್ಲಿ ಎಷ್ಟೋ ವರ್ಷಗಳಿಂದ ಸಾಧ್ಯವಾಗದ ರಸ್ತೆ ಕಾಮಗಾರಿಯನ್ನು ನಾವು ಮಾಡಿ ಮುಗಿಸಿದ್ದೇವೆ. ಕಾರವಾರದ ದೇವಳಮಕ್ಕಿಯಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ ಸಾರ್ವಜನಿಕರು 3 ಕಿ.ಮೀ. ಗದ್ದೆಯಲ್ಲಿ ನಡೆದುಕೊಂಡೇ ಓಡಾಡುವ ಪರಿಸ್ಥಿತಿ ಇತ್ತು ಯಾವ ಸರಕಾರದಿಂದಲೂ ಸಾಧ್ಯವಾಗದ ಕೆಲಸವನ್ನ ನಾವು ಮಾಡಿ ಮುಗಿಸಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.
ದೇಶಕಂಡ ಅಪ್ರತಿಮ ಪ್ರಧಾನಿ ನರೇಂದ್ರ ಮೋದಿಜೀರವರು ಆಗಮಿಸುತ್ತಿದ್ದಾರೆ. ನಾನು ಪ್ರತಿದಿನ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದೊಂದೆ ದೇಶಕ್ಕೆ ದೊರೆತಿರುವ ಈ ಅಪ್ರತಿಮ ನಾಯಕನನ್ನು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡು ಎಂಬುದಾಗಿದೆ. ನರೇಂದ್ರ ಮೋದಿಜೀರವರು ಇದೇ ಮೊದಲ ಬಾರಿಗೆ ನಮ್ಮ ಜಿಲ್ಲೆಗೆ ಆಗಮಿಸುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಇದು ಪ್ರತಿಯೊಬ್ಬ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಹಾಗೂ ಜಿಲ್ಲೆಯ ಜನತೆಗೆ ಹರ್ಷ ತಂದಿದೆ ಎಂದರು.
ಯೋಜನೆ ಹಾಗೂ ಯೋಚನೆಗಳಿಂದ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿಗೆ ಅಡ್ಡಗಾಲು ಹಾಕುವವರಿಂದ ಅಭಿವೃದ್ಧಿಯ ವೇಗ ತಗ್ಗಿಸಬಹುದೇ ಹೊರತು ಅಭಿವೃದ್ಧಿಯನ್ನ ನಿಲ್ಲಿಸಲು ಸಾಧ್ಯವಿಲ್ಲ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ. ಮತ್ತೊಮ್ಮೆ ತಮ್ಮೆಲ್ಲರ ಆಶೀರ್ವಾದ ನನಗೆ ನೀಡುವಂತೆ ಮತಯಾಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ರಾಜ್ಯ ಪ್ರಮುಖರಾದ ಹೂವಾ ಖಂಡೆಕರ, ರಾಜೇಂದ್ರ ನಾಯ್ಕ, ಹಾಲಕ್ಕಿ ಸಮಾಜದ ಪ್ರಮುಖರಾದ ಹನುಮಂತ ಗೌಡ, ಅಂಕೋಲಾ ಮಂಡಲ ಅಧ್ಯಕ್ಷರಾದ ಸಂಜಯ ನಾಯ್ಕ, ಜಗದೀಶ ನಾಯಕ, ಆರತಿ ಗೌಡ, ಮಹಾಶಕ್ತಿಕೇಂದ್ರ, ಶಕ್ತಿ ಕೇಂದ್ರ, ಬೂತ್ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು .