ಶಿರಸಿ: ಸರ್ಕಾರಿ ಶಾಲೆಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಕಾಂಪೌಂಡ್ ನಿರ್ಮಿಸಲಾಗುತ್ತಿದೆ.
ತಾಲೂಕಿನ ದೇವನಳ್ಳಿ ಗ್ರಾಮ ಪಂಚಾಯತ್‌ನ ವ್ಯಾಪ್ತಿಯಲ್ಲಿ ವಿವಿಧೆಡೆ ಈಗಾಗಲೇ 5 ಕಾಂಪೌಂಡ್ ಗಳು ಸಿದ್ದವಾಗಿವೆ. 2021-22ನೇ ಸಾಲಿನಲ್ಲಿ ತಲಾ 3,52,500 ರೂ ವೆಚ್ಚದಲ್ಲಿ ಸರಗುಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೂರು ಹಾಗೂ ಸರಗುಪ್ಪಾ ಶಾಲೆ ಮತ್ತು ಹಲಸಿನಕಟ್ಟಾ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಹಲಸಿನಕಟ್ಟಾ, ದೇವನಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 96 ಮೀಟರ್‌ಗಳಷ್ಟು ಸುಸಜ್ಜಿತ ಕಾಂಪೌಂಡ್ ನಿರ್ಮಿಸಲಾಗಿದೆ.
ಇನ್ನು ದೇವನಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು1 ಲಕ್ಷ ರೂ. ವೆಚ್ಚದಲ್ಲಿ ವಾಲಿಬಾಲ್ ಮೈದಾನ ಅಭಿವೃದ್ಧಿಪಡಿಸಲಾಗಿದ್ದು, ಗ್ರಾಮದಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 11ಸರ್ಕಾರಿ ಶಾಲೆಗಳಿದ್ದು, ನರೇಗಾದಡಿ ಪೌಷ್ಟಿಕ ಕೈತೋಟ, ಆಟದ ಮೈದಾನ ಅಭಿವೃದ್ಧಿ, ಶಾಲಾ ಕಾಂಪೌಂಡ್ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ನರೇಗಾದಡಿ ಕೈಗೊಂಡ ಶಾಲಾ ಕಾಮಗಾರಿಗಳಿಗೆ ಗ್ರಾಮಸ್ಥರು ಹಾಗೂ ಊರಿನ ಯುವಕ ಮಂಡಳಿ ಮುಂದೆ ನಿಂತು ಕೆಲಸ ನಿರ್ವಹಿಸುತ್ತಿದೆ. ಇದು ಗ್ರಾಮದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರ್ ವಾಸನ್ ಅಭಿಪ್ರಾಯ ವ್ಯಕ್ತಪಡಿಸಿದರು.