ಮುಂಡಗೋಡ: ತಾಲೂಕಿನ ರೈತರು ಅತಿಯಾದ ರಸಗೊಬ್ಬರ, ಕೃತಕ ಸತ್ಯಾಂಶವುಳ್ಳ ಪೋಷಕಾಂಶಗಳು ಮತ್ತು ಪೀಡೆನಾಶಕಗಳನ್ನು ಬಳಸುತ್ತಿದ್ದು, ಇದರಿಂದ ರೈತರ ಆದಾಯದಲ್ಲಿ ನಷ್ಟ, ಮಣ್ಣಿನ ಫಲವತ್ತತೆ ಮತ್ತು ಅದರ ಗುಣಧರ್ಮ ಕ್ಷೀಣಿಸುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್.ಕುಲಕರ್ಣಿ ತಿಳಿಸಿದ್ದಾರೆ.
ಇದಕ್ಕೆ ಪರಿಹಾರವಾಗಿ ಹಸಿರೆಲೆ ಗೊಬ್ಬರದ ಬೆಳೆಯಾದ ಸೆಣಬನ್ನು ಹೆಚ್ಚಿನ ಪ್ರಮಾಣದಲ್ಲಿ ಹೂ ಬಿಡುವುದಕ್ಕಿಂತ ಮುಂಚೆ ಮಣ್ಣಿನೊಳಗೆ ಸೇರಿಸಬೇಕು. ಇದರಿಂದ ಮುಂಬರುವ ಮುಂಗಾರು ಹಂಗಾಮಿನ ಬೆಳೆಗಳಿಗೆ ಉತ್ತಮ ಪೋಷಕಾಂಶ ನೀಡುವುದು. ಮಣ್ಣನ್ನು ಫಲವತ್ತತೆ ಮಾಡುವಲ್ಲಿ ಹಾಗೂ ಹೆಚ್ಚಿನ ಇಳುವರಿಗೆ ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಕೃಷಿಕರಿಗೆ ಮುಂದಿನ ಮುಂಗಾರಿನ ಬೇಸಾಯವನ್ನು ಲಾಭದತ್ತ ಕರೆದೊಯ್ಯಲು ಕೃಷಿ ಇಲಾಖೆ ಹಸಿರಲೆ ಗೊಬ್ಬರದ ಬೆಳೆಯಾದ ಸೆಣಬು ಬೀಜವನ್ನು ಸಹಾಯಧನ ರೂಪದಲ್ಲಿ ದೊರಕಿಸಿ ಕೊಡುತ್ತಿದೆ.
ಬಿತ್ತನೆ ವಿಧಾನ: ವರ್ಷದ ಮೊದಲ ಮಳೆ ಬಂದಾಗ ಅಥವಾ ಮುಖ್ಯ ಬೆಳೆ ಕಟಾವಾದ ನಂತರ ಮುಂದಿನ ಮುಂಗಾರಿನ 40 ದಿನಗಳ ಅಂತರದ ಬಿತ್ತನೆಗೆ ಮುಂಚಿತವಾಗಿ ಮಣ್ಣಿನಲ್ಲಿರುವ ತೇವಾಂಶವನ್ನು ಉಪಯೋಗಿಸಿಕೊಂಡು/ಹದ ಮಾಡಿದ ಗದ್ದೆಗೆ ಎಕರೆಗೆ 12 ಕೆಜಿಯಂತೆ ಸೆಣಬು ಬೀಜವನ್ನು ಬಿತ್ತನೆ ಮಾಡಬೇಕು ಎಂದು ತಿಳಿಸಿದ್ದಾರೆ.
40 ದಿನಗಳಲ್ಲಿ ಸೆಣಬು ಗಿಡಗಳು 3-4 ಅಡಿಯಷ್ಟು ಎತ್ತರವಾಗಿ ಹುಲುಸಾಗಿ ಬೆಳೆಯುತ್ತವೆ. ಇದರಿಂದ ಎಕರೆಗೆ ಅಂದಾಜು 10ರಿಂದ 12 ಟನ್‌ಗಳಷ್ಟು ಹಸಿಸೊಪ್ಪು ಲಭ್ಯವಾಗುತ್ತದೆ. ಇದರಿಂದ ಕಡಿಮೆ ಖರ್ಚಿನಲ್ಲಿ ಮುಂಬರುವ ಮುಂಗಾರಿನ ಬೆಳೆಗಳಿಗೆ ಹೆಚ್ಚಿನ ಇಳುವರಿ ತೆಗೆಯಲು ಉತ್ತಮ ಪೋಷಕಾಂಶಗಳನ್ನು ಒದಗಿಸಿದಂತಾಗುತ್ತದೆ. ರೈತ ಸಂಪರ್ಕ ಕೇಂದ್ರ ಮುಂಡಗೋಡ ಮತ್ತು ಪಾಳಾದಲ್ಲಿ ಸಹಾಯ ಧನದಡಿಯಲ್ಲಿ ಸೆಣಬು ಬೀಜ ಲಭ್ಯವಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.