ನವದೆಹಲಿ: 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿರುವ ರಾಹುಲ್ ಗಾಂಧಿಗೆ ಮತ್ತೆ ಹಿನ್ನೆಡೆಯಾಗಿದೆ. ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಮನವಿಯನ್ನು ಗುಜರಾತ್‌ನ ಸೂರತ್‌ನ ಸೆಷನ್ಸ್ ನ್ಯಾಯಾಲಯವು ಗುರುವಾರ ತಿರಸ್ಕರಿಸಿದೆ.
ನ್ಯಾಯಾಲಯದ ತಡೆಯಾಜ್ಞೆ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಲು ದಾರಿ ಮಾಡಿಕೊಡಬಹುದಿತ್ತು. ಈಗ, ಅವರ ಮನವಿಯನ್ನು ತಿರಸ್ಕರಿಸುವುದರೊಂದಿಗೆ, ವಯನಾಡಿನ ಮಾಜಿ ಸಂಸದರು ಅನರ್ಹರಾಗಿಯೇ ಉಳಿಯಲಿದ್ದಾರೆ. ಈ ಆದೇಶದ ವಿರುದ್ಧ ಪಕ್ಷವು ಈಗ ಗುಜರಾತ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ತೀರ್ಪಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ, ಮಾನನಷ್ಟ ಮೊಕದ್ದಮೆಯಲ್ಲಿ ಯಾವುದೇ ನಾಯಕನಿಗೆ ಎರಡು ವರ್ಷಗಳ ಗರಿಷ್ಠ ಶಿಕ್ಷೆ ವಿಧಿಸಲಾಗಿಲ್ಲ ಮತ್ತು ಈ ಆದೇಶದ ವಿರುದ್ಧ ಕಾಂಗ್ರೆಸ್ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಹೇಳಿದರು.