ಜಮ್ಮು: ಕೆಲವು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಲೋಹಾಯ್ ಮಲ್ಲಾರ್ ಎಂಬ ಗ್ರಾಮದ ಪುಟ್ಟ ಹುಡುಗಿ, 3ನೇ ತರಗತಿ ವಿದ್ಯಾರ್ಥಿನಿ ಸೀರಾತ್ ನಾಜ್ ತಾನು ಓದುತ್ತಿರುವ ಶಾಲೆಯ ದುಃಸ್ಥಿತಿಯನ್ನು ವಿಡಿಯೊ ಮಾಡಿ ತೋರಿಸಿದ್ದಳು. ಅಲ್ಲದೆ, ‘ನನ್ನ ಶಾಲೆ ಎಷ್ಟು ಕೊಳಕಾಗಿದೆ ನೋಡಿ ಮೋದಿ ಜೀ, ಈ ಕಲ್ಲು-ಮಣ್ಣು ಎದ್ದಿರುವ ನೆಲದ ಮೇಲೆ ಕುಳಿತುಕೊಂಡು ನಾವು ಪಾಠ ಆಲಿಸುವುದಾದರೂ ಹೇಗೆ? ದಯವಿಟ್ಟು ನಮಗಾಗಿ ಒಂದು ಒಳ್ಳೆ ಶಾಲೆ ಕಟ್ಟಿಸಿಕೊಡಿ’ ಎಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಳು. ಆ ವಿದ್ಯಾರ್ಥಿನಿಯ ಕೋರಿಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ತಲುಪಿದೆ. ಜಮ್ಮುಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ರವಿ ಶಂಕರ್ ಶರ್ಮಾ ಲೋಹಾಯ್ ಹಳ್ಳಿಯಲ್ಲಿರುವ ಈ ಶಾಲೆಗೆ ಭೇಟಿ ಕೊಟ್ಟು, ಅಲ್ಲಿನ ಸ್ಥಿತಿಯನ್ನು ಪರಿಶೀಲನೆ ಮಾಡಿದ್ದಾರೆ.
ಬಾಲಕಿಯ ವಿಡಿಯೊ ವೈರಲ್ ಆಗುತ್ತಿದ್ದಂತೆ ಜಮ್ಮು-ಕಾಶ್ಮೀರದ ಆಡಳಿತ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಆ ಶಾಲೆಗೆ ಕಾಯಕಲ್ಪ ನೀಡಲು ಮುಂದಾಗಿದೆ. ಶಾಲೆಯನ್ನು ದುರಸ್ತಿ ಪಡಿಸಿ, ಆಧುನಿಕವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ 91 ಲಕ್ಷ ರೂಪಾಯಿ ಮಂಜೂರು ಮಾಡಿದೆ. ನೆಲಕ್ಕೆಲ್ಲ ಟೈಲ್ಸ್ ಹಾಕಿ, ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಶಾಲಾ ಆಡಳಿತ ಅನುಮೋದನೆ ಕೊಟ್ಟ ತಕ್ಷಣವೇ ವರ್ಕ್ ಶುರುವಾಗುತ್ತದೆ ಎಂದು ಡಾ. ರವಿ ಶಂಕರ್ ಶರ್ಮಾ ತಿಳಿಸಿದ್ದಾರೆ. ‘ಅಂದಹಾಗೇ, ಈ ಶಾಲೆಯೂ ಸೇರಿ ಸುಮಾರು 100 ಶಾಲೆಗಳು ಹೀಗೆ ದುರ್ಗಮ ಪ್ರದೇಶಗಳಲ್ಲಿವೆ. ಇಂಥ ಎಲ್ಲ ಶಾಲೆಗಳನ್ನೂ ಅಭಿವೃದ್ಧಿಪಡಿಸುತ್ತೇವೆ. ಆಧುನಿಕ ಸೌಲಭ್ಯ ನೀಡುತ್ತೇವೆ’ ಎಂದೂ ಶರ್ಮಾ ಹೇಳಿದ್ದಾರೆ.’ಜಮ್ಮು ಪ್ರಾಂತ್ಯದ ಎಲ್ಲ ಜಿಲ್ಲೆಗಳಲ್ಲೂ ಸೇರಿ 1,000 ಹೊಸ ಶಿಶುವಿಹಾರಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.
ಸೀರಾತ್ ನಾಜ್ ಫುಲ್ ಖುಷಿಯಾಗಿದ್ದಾಳೆ. ತಾನು ಐಎಎಸ್ ಅಧಿಕಾರಿಯಾಗಬೇಕು ಎಂದು ಕನಸು ಹೊಂದಿರುವ ಆಕೆ ಈಗ ಮತ್ತೊಂದು ವಿಡಿಯೊ ಮಾಡಿದ್ದಾಳೆ.’ಪ್ರಧಾನಿ ನರೇಂದ್ರ ಮೋದಿಯವರೇ ಅಧಿಕಾರಿಗಳನ್ನು ಕಳಿಸಿದ್ದಾರೆ. ಇಲ್ಲೆಲ್ಲ ಪರಿಶೀಲನೆ ಮಾಡಿ ಹೋಗಿದ್ದಾರೆ. ಅಂದು ನಾನೇ ಸ್ವತಃ ವಿಡಿಯೊ ಮಾಡಿದ್ದೆ. ಯಾರೂ ಹೇಳಿರಲಿಲ್ಲ. ಆದರೆ ವಿಡಿಯೊಕ್ಕೆ ಇಷ್ಟರ ಮಟ್ಟಿಗೆ ಪ್ರತಿಫಲ ಸಿಗುತ್ತದೆ ಅಂದುಕೊಂಡಿರಲಿಲ್ಲ’ ಎಂದು ಹೇಳಿಕೊಂಡಿದ್ದಾಳೆ. ಸ್ಥಳೀಯರೂ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಶಾಲೆ ನವೀಕರಣಗೊಳ್ಳುತ್ತದೆ ಎಂಬುದೇ ನಮಗೆ ಸಂತೋಷ ಎಂದಿದ್ದಾರೆ