ಶಿರಸಿ: ಶಿರಸಿ- ಸಿದ್ದಾಪುರ ಕ್ಷೇತ್ರದ ಜೆಡಿಯಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಪೇಂದ್ರ ಪೈ ತಮ್ಮ ಕುಟುಂಬ ಸಮೇತರಾಗಿ ಶ್ರೀಮಾರಿಕಾಂಬಾ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಬಳಿಕ ನಾಮಪತ್ರ ಸಲ್ಲಿಕೆ ಮಾಡಿದರು.
ಉಪೇಂದ್ರ ಪೈ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಹೊರಬಂದಂತೆ ಅವರಿಗೆ ಅಪಾರ ಸಂಖ್ಯೆಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಉಪೇಂದ್ರ ಪೈ ಅಭಿಮಾನಿಗಳು ಹೂಮಾಲೆಗಳನ್ನು ಹಾಕಿ ಅದ್ದೂರಿಯಾಗಿ ಬರಮಾಡಿಕೊಂಡರು. ಅಲ್ಲಿಂದ ಬ್ಯಾಂಡ್‌ಗಳ ಅಬ್ಬರ, ಕಾರ್ಯಕರ್ತರ ಜಯಘೋಷದ ನಡುವೆ ಹೊರಟ ಮೆರವಣಿಗೆಯು ಶಿವಾಜಿ ಚೌಕ್, ಹಳೆ ಬಸ್ ನಿಲ್ದಾಣ, ಸಿ.ಪಿ.ಬಝಾರ್ ಮೂಲಕ ಝೂ ಸರ್ಕಲ್‌ನಿಂದ ಜೆಡಿಎಸ್ ಕಚೇರಿಗೆ ತೆರಳಿತು. ಮೆರವಣಿಗೆಯುದ್ದಕ್ಕೂ ಜೆಡಿಎಸ್ ಬಾವುಟಗಳು ರಾರಾಜಿಸತೊಡಗಿದವು. ಮೆರವಣಿಗೆಯಲ್ಲಿ ತೆನೆಹೊತ್ತು ಬಂದ ಮಹಿಳೆಯೋರ್ವಳು ಆಕರ್ಷಣೆಯ ಕೇಂದ್ರವಾಗಿ ಕಂಡುಬಂದರು.
ಜೆಡಿಎಸ್ ಒಂದು ಜ್ಯಾತ್ಯಾತೀತ ಪಕ್ಷವೆಂದು ಇಲ್ಲಿ ಸೇರಿದ ವಿವಿಧ ಧರ್ಮದ ಜನರಿಂದ ತಿಳಿಯುತ್ತದೆ. ರಾಷ್ಟ್ರಕವಿ ಕುವೆಂಪುರವರು ಹೇಳುವಂತೆ ನಮ್ಮ ಪಕ್ಷ ವಿವಿಧ ಜಾತಿಯ ಹೂಗಳಿರುವ ಶಾಂತಿಯ ತೋಟ ಎಂದ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ, ಕೇವಲ ಒಂದು ಧರ್ಮದ ಜನರಿರುವ, ಕೇವಲ ತಾವೊಬ್ಬರೇ ಅಧಿಕಾರ ನಡೆಸುವ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಪಕ್ಷದ ಮೆರವಣಿಗೆಯೊಂದು ಈಗಷ್ಟೇ ತೆರಳಿತು ಎಂದು ಪರೋಕ್ಷವಾಗಿ ಕಾಗೇರಿಯವರಿಗೆ ಟಾಂಗ್ ನೀಡಿದರು.
ಇನ್ನೂ ಕೆಲವರು ಮೇಲಿಂದ ಮೇಲೆ ಸೋತ ಮೇಲೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ಕೇವಲ ಮರಳಿ ಯತ್ನವ ಮಾಡುತ್ತಿದ್ದಾರೆ. ಅವರು ಪ್ರತಿ ಬಾರಿಯೂ ಸೋತಂತೆ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ಒಮ್ಮೆ ಸೋತ ಮೇಲೆ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಜನರಿಗೆ ಅಪಶಕುನದ ಬೆಕ್ಕು ಬಂದ ಅನುಭವಾಗುತ್ತದೆ ಎಂದರು.
ನಮ್ಮ ಜೆಡಿಎಸ್ ಕಾರ್ಯಕರ್ತರ ಉತ್ಸಾಹ ನೋಡಿದರೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ರಾತ್ರಿ ಜ್ವರ ಬರುವುದಂತೂ ನಿಜ. ಕುಮಾರಣ್ಣ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಎರಡು ಬಾರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿಯೂ ಕೂಡಾ ಜನ ಹಾಗೂ ರೈತರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ರೈತರ ಸಾಲ ಮನ್ನಾ, ಲಾಟರಿ ಟಿಕೆಟ್ ಬ್ಯಾನ್, ಕೊಟ್ಟೆ ಸರಾಯಿ ಬ್ಯಾನ್ ಹೀಗೆ ಅನೇಕ ಅನಿಷ್ಠಗಳನ್ನು ಬ್ಯಾನ್ ಮಾಡಿದರು. ಈಗ ಪಂಚರತ್ನ ಯೋಜನೆಗಳ ಮೂಲಕ ಜನ ಹಾಗೂ ರೈತರಿಗೆ ಇನ್ನಷ್ಟು ಅನುಕೂಲಗಳನ್ನು ಮಾಡಲು ಬಂದಿದ್ದಾರೆ. ಆದ್ದರಿಂದ ಈ ಬಾರಿ ಕುಮಾರಣ್ಣನ ಜೊತೆಗೆ ನನಗೂ ಆರಿಸಿ ಕಳುಹಿಸಬೇಕೆಂದು ಮನವಿ ಮಾಡಿದರು.