ದಾಂಡೇಲಿ: ನಗರದ ಬರ್ಚಿ ರಸ್ತೆಯಲ್ಲಿರುವ ಜನವಸತಿ ಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಲಾದ ಕುಡಿಯುವ ನೀರಿನ ನಲ್ಲಿ ಇರುವ ಜಾಗವನ್ನು ಸ್ಥಳೀಯ ನಿವಾಸಿಯೊಬ್ಬರು ಅತಿಕ್ರಮಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ, ಸ್ಥಳೀಯ ನಿವಾಸಿಗಳು ಬರ್ಚಿ ರಸ್ತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ನಳ್ಳ ಇರುವ ಸ್ಥಳ ಖಾಲಿಯಿದ್ದು, ಆ ಜಾಗವನ್ನು ಅತಿಕ್ರಮಣ ಮಾಡುವ ಉದ್ದೇಶದಿಂದ ಕಬ್ಬಿಣದ ಕಂಬ ಹಾಕಿ ಅದರ ಮೇಲ್ಗಡೆ ತಗಡಿನ ಶೀಟ್ ಹಾಕುವ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಇದರಿಂದ ತೊಂದರೆಯಾದೀತೆನ್ನುವ ಉದ್ದೇಶದಿಂದ ಆಕ್ರೋಶ ವ್ಯಕ್ತಪಡಿಸಿ, ತೆರವಿಗೆ ಆಗ್ರಹಿಸಿದ್ದಾರೆ.