Slide
Slide
Slide
previous arrow
next arrow

ಸಾಹಿತ್ಯದ ಒಲವಿಗೆ ಅಂಕೋಲೆಯೇ ಸ್ಫೂರ್ತಿ: ಅರವಿಂದ ಕರ್ಕಿಕೊಡಿ

300x250 AD

ಅಂಕೋಲಾ: ನನ್ನ ಸಾಹಿತ್ಯದ ಬಗೆಗಿನ ಹೆಚ್ಚಿನ ಆಸಕ್ತಿಯನ್ನು ಅಂಕೋಲೆಯೇ ನೀಡಿದ್ದು, ಇಲ್ಲಿನ ಸಾಹಿತಿಗಳಾದ ವಿಷ್ಣು ನಾಯ್ಕ, ಅಮ್ಮೆಬಾಳ ಆನಂದ, ಬಿ.ಹೊನ್ನಪ್ಪ, ಮೋಹನ್ ಹಬ್ಬು, ಶಿವ ಬಾಬ ನಾಯ್ಕ, ಗೋಪಾಲಕೃಷ್ಣ ನಾಯಕ ಅವರ ಸಾಹಿತ್ಯ ಕಾರ್ಯಕ್ರಮಗಳಿಗೆ ಕಾಲೇಜು ದಿನಗಳಲ್ಲಿ ಹಾಜರಾಗುತ್ತಿದ್ದೆ. ಆಗಲೇ ಹಣತೆಯ ಪರಿಕಲ್ಪನೆ ಮೊಳಕೆಯೊಡೆಯಿತು. ಕನ್ನಡದ ಕಾರ್ಯವನ್ನು ವೈಯಕ್ತಿಕ ಮಮತೆಯಿಂದ ಮಾಡುತ್ತಿದ್ದೇನೆ ಎಂದು ಹಣತೆಯ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೊಡಿ ಹೇಳಿದರು.

ಅವರು ತಾಲೂಕಿನ ಕೆ.ಎಲ್.ಇ ಸಭಾಭವನದಲ್ಲಿ ನಡೆದ ಹಣತೆ ಅಂಕೋಲಾ ತಾಲೂಕಿನ ನೂತನ ಘಟಕ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸಾಹಿತ್ಯಕ್ಕೆ ಸ್ಫೂರ್ತಿಯಾದ ಅಂಕೋಲೆಯ ನೆಲದಲ್ಲಿ ಇಂದು ಹಣತೆಯ ತಾಲೂಕು ಘಟಕ ಉದ್ಘಾಟನೆಯಾಗಿದ್ದು ಹಿರಿಯರು ಚಿಂತಕರು ನೀಡುವ ಸಲಹೆಗಳನ್ನು ಪಾಲಿಸಿಕೊಂಡು ಮುನ್ನಡೆಯಲಿದೆ ಎಂದರು.

ಹಣತೆ ಬೆಳಗುವುದರ ಮೂಲಕ ನೂತನ ಘಟಕ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಎಂ.ಡಿ.ನಾಯ್ಕ ಹನೆಹಳ್ಳಿ, ಹಣತೆ ಕೇವಲ ಸಾಹಿತ್ಯ ಕ್ಷೇತ್ರಗಳಿಗೆ ಸೀಮಿತವಾಗದೆ, ಕೌಶಲ್ಯ ತರಬೇತಿ, ಸ್ಪರ್ಧಾತ್ಮಕ ತರಬೇತಿ, ಪತ್ರಿಕೋದ್ಯಮ ಸೇರಿದಂತೆ ಹಲವಾರು ಸಮಾಜಮುಖಿ ಉದ್ದೇಶಗಳನ್ನು ಇಟ್ಟುಕೊಂಡು ಬಲವರ್ಧನೆಯಾಗುತ್ತಿರುವ ಸಂಘಟನೆಯಾಗಿದೆ. ಹಣತೆ ಎಂಬ ಜ್ಞಾನದ ದೀವಿಗೆಯು ಭಾರತೀಯ ಸಂಸ್ಕೃತಿಯ ಬತ್ತಿಯೊಂದಿಗೆ ಜಿಲ್ಲೆಯ ಮನೆ ಮನಗಳಲ್ಲಿ ಸದಾ ಬೆಳಗುತ್ತಿರಲಿ. ಹಣತೆ 20 ವರ್ಷಗಳ ಹಿಂದಿನ ಸಂಘಟನೆಯಾಗಿದ್ದು, ಅಂಕೋಲಾದಲ್ಲಿ ಉತ್ಸಾಹಿ ತರುಣರ ಒಗ್ಗೂಡುವಿಕೆಯಲ್ಲಿ ನವಚೈತನ್ಯವನ್ನು ತುಂಬಿಸಿಕೊಂಡಿದೆ. ಅಂಕೋಲೆಯ ಸಾಹಿತ್ಯಕ ಸಾಂಸ್ಕೃತಿಕ ಜಗಲಿಯಲ್ಲಿ ಹಣತೆ ಬೆಳೆದು ಬೆಳಗಲಿ ಎಂದು ಹಾರೈಸಿದರು.

300x250 AD

ಹಣತೆ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಎಚ್.ಜಯಚಂದ್ರನ್ ಅವರು ಹಣತೆಯ ರೂಪುರೇಷೆ ಮತ್ತು ಉದ್ದೇಶಗಳ ಕುರಿತು ಸಮಗ್ರವಾಗಿ ವಿವರಿಸಿದರು. ತಾಲೂಕ ಘಟಕದ ಕೋಶಾಧ್ಯಕ್ಷ ನಾಗರಾಜ್ ಜಾಂಬ್ಳೇಕರ್ ನೂತನ ಘಟಕದ ಕಾರ್ಯೋದ್ದೇಶಗಳ ಬಗ್ಗೆ ಆಶಯ ನುಡಿಗಳನ್ನಾಡಿದರು. ಕೆಎಲ್‌ಇ ಕಾಲೇಜಿನ ಡಾ.ವಿನಾಯಕ ಹೆಗಡೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅರ್ಚನಾ ನಾಯ್ಕ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಹಣತೆ ತಾಲೂಕ ಘಟಕದ ಅಧ್ಯಕ್ಷ ಅಕ್ಷಯ ಎಸ್.ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ಹಾಗೂ ಹಿರಿಯ ಚುಟುಕು ಕವಿ ಶಿವ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶೀತಲ ಆಗೇರ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಸರ್ವರನ್ನು ದೀಪಾ ಜೆ.ನಾಯ್ಕ ಸ್ವಾಗತಿಸಿದರು. ನಿಶಾಂತ ಎಂ.ಆಗೇರ ವಂದಿಸಿದರು. ಉಪನ್ಯಾಸಕ ಮಾರುತಿ ಹರಿಕಂತ್ರ ನಿರೂಪಿಸಿದರು, ಈ ಸಂದರ್ಭದಲ್ಲಿ ತಾಲೂಕಾ ಘಟಕದ ಸದಸ್ಯರಾದ ಅನಂತ್ ಕಟ್ಟಿಮನಿ, ವಿಘ್ನೇಶ್ ನಾಯ್ಕ, ಅಬಿಷೇಕ್ ನಾಯ್ಕ, ಅಮಿತ್ ಗೌಡ, ಮೇಘನಾ ಆಗೇರ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top