ಭಟ್ಕಳ: ತಾಲೂಕಾ 10ನೇ ಸಾಹಿತ್ಯ ಸಮ್ಮೇಳನದ ಜಮಾಖರ್ಚು ಮಂಡನೆಯು ಇಲ್ಲಿನ ಶಿರಾಲಿಯಲ್ಲಿ ನಡೆಯಿತು.
ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಜಮಾಖರ್ಚನ್ನು ಸಭೆಗೆ ಮಂಡಿಸಿ, ದಾನಿಗಳಿಂದ ಹಾಗೂ ಸಂಘ ಸಂಸ್ಥೆಗಳಿAದ ಒಟ್ಟೂ 1.66 ಲಕ್ಷ ಜಮಾ ಆಗಿದ್ದು, ಒಟ್ಟೂ 2.01 ಲಕ್ಷ ರೂ. ಖರ್ಚಾಗಿದೆ. ಕೇಂದ್ರ ಕಸಾಪದಿಂದ ಒಂದು ಲಕ್ಷ ಅನುದಾನ ಬಿಡುಗಡೆಯಾಗಲಿದ್ದು, ಉಳಿದ ಹಣವನ್ನು ಸರಿದೂಗಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಾ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ದಾನಿಗಳು, ಸಂಘ ಸಂಸ್ಥೆಗಳು, ಸ್ವಾಗತ ಸಮಿತಿ, ಕಾರ್ಯಕಾರಿ ಸಮಿತಿ, ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಜಿಲ್ಲಾ ಕಸಾಪ ಘಟಕ, ತಾಲೂಕಾ ಆಡಳಿತ, ವಿವಿಧ ಇಲಾಖೆಗಳು, ಸಾಹಿತಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿ ಸಮೂಹ, ಮಾಧ್ಯಮದ ಮಿತ್ರರು ಹಾಗೂ ಎಲ್ಲ ಕನ್ನಡದ ಮನಸುಗಳ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಸಾಪ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಸಮ್ಮೇಳನದ ಖರ್ಚು ವೆಚ್ಛವನ್ನು ಸಾರ್ವಜನಿಕರಿಗೆ ತಿಳಿಸುವುದು ಸಮ್ಮೇಳನದ ಯಶಸ್ಸಿನ ಭಾಗವಾಗಿದೆ. ಈ ಬಾರಿಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಹೆಚ್ಚಿನ ಪಾಲ್ಗೊಳ್ಳುವಿಕೆ ಸಂತಸ ತರುವಂಥದ್ದು. ಇದರಿಂದ ಸಾಹಿತ್ಯ ಮನೆ ಮನೆಗೆ ತಲುಪಲು ಸಾಧ್ಯ ಎಂದು ನುಡಿದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿ ಸಮ್ಮೇಳನವನ್ನು ಸಂಘಟಿಸಿದುದಕ್ಕಾಗಿ ತಾಲೂಕು ಘಟಕವನ್ನು ಅಭಿನಂದಿಸಿದರು.
ಹಿರಿಯ ಸಾಹಿತಿ ಡಾ.ಆರ್.ವಿ ಸರಾಫ್ ಮಾತನಾಡಿ, ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಎಲ್ಲ ಸಾಹಿತ್ಯಾಸಕ್ತರಿಗೆ ಇನ್ನಷ್ಟು ಹುರುಪು ನೀಡುವಂತಾಗಿದೆ ಎಂದರು. ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ, ಕೋಶಾಧ್ಯಕ್ಷ ಶ್ರಿಧರ ಶೇಟ್, ಎಂ.ಪಿ.ಭಂಡಾರಿ, ಸಂತೋಷ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.