ಶಿರಸಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್ ಅಂಬೇಡ್ಕರವರ 132ನೇ ಜಯಂತಿಯನ್ನು ಆಚರಿಸಲಾಯಿತು.
ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ಸತೀಶ ನಾಯ್ಕ ಡಾ.ಅಂಬೇಡ್ಕರವರ ಕುರಿತು ವಿಶೇಷ ಉಪನ್ಯಾಸವನ್ನು ನೀಡುತ್ತ, ಭಾರತದ ಸಂವಿಧಾನವನ್ನು ರಚಿಸಿ ದೇಶಕ್ಕೆ ಅತ್ಯಂತ ಅಮೂಲ್ಯವಾದಂತಹ ಕೊಡುಗೆಯನ್ನು ನೀಡಿದ್ದಾರೆ. ನೀನು ತಲೆ ತಗ್ಗಿಸಿ ಓದು, ಅದು ನಿನ್ನನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂಬ ಅವರ ಈ ಘೋಷವಾಕ್ಯ ನಮ್ಮೆಲ್ಲರ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಾಕ್ಷಾಯಣಿ ಹೆಗಡೆ, ಭಾರತದ ಸಂವಿಧಾನ ಶಿಲ್ಪಿ ಭಾರತದ ಅಮೋಘ ರತ್ನ ಡಾ.ಬಿ.ಆರ್ ಅಂಬೇಡ್ಕರವರು ದೇಶದ ಸಮಸ್ತ ಜನರು ಜೀವನವೆಂಬ ಅಪಾರ ಸಮುದ್ರದಲ್ಲಿ ಸುರಕ್ಷಿತವಾಗಿ ಪ್ರಯಾಣ ಮಾಡಲು ಭಾರತದ ಸಂವಿಧಾನವೆ0ಬ ಶ್ರೇಷ್ಠವಾದ ಹಡಗನ್ನು ನಿರ್ಮಾಣ ಮಾಡಿ ದೇಶಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿ ಭಾರತರತ್ನವೆಂಬ ಬಿರುದು ಪಡೆದು ವಿಶ್ವರತ್ನವಾಗಿ ಬೆಳಗಿದ್ದಾರೆ. ಅವರ ಅಪ್ರತಿಮವಾದ ಜ್ಞಾನ ಪರಿಶಿಷ್ಟ ಜಾತಿ ಪಂಗಡದವರ ಅಭಿವೃದ್ಧಿಗಾಗಿ ಮಾಡಿದಂತಹ ತ್ಯಾಗ ದೇಶದ ಉನ್ನತಿಗಾಗಿ ಶ್ರಮಿಸಿದ ಕೃತ್ಯಗಳು ವಿಶ್ವಮಾನ್ಯವಾಗಿವೆ. ಅಂತಹ ಆದರ್ಶ ಪ್ರಾಯವಾದ ವ್ಯಕ್ತಿತ್ವ ಹಾಗೂ ರಾಷ್ಟ್ರಪ್ರೇಮ ನಮ್ಮೆಲ್ಲರ ಜೀವನಕ್ಕೆ ಸ್ಫೂರ್ತಿ ಹಾಗೂ ದಾರಿ ದೀಪವಾಗಬೇಕಾಗಿದೆ ಎಂದರು.
ಕಾಲೇಜಿನ ಶೋಭಾ ಪ್ರಾರ್ಥಿಸಿದರು, ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ದಾನರಡ್ಡಿ ಎಲ್ಲರನ್ನು ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪುರುತಗೇರಿ ಮಧು ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಶಾ ನಾಯ್ಕ ಕಾರ್ಯಕ್ರಮನ್ನು ನಿರ್ವಹಿಸಿದರು.