ಮುಂಡಗೋಡ: ದುಡಿಯುವ ವರ್ಗಕ್ಕೆ ಕೆಲಸ ನೀಡಿ ಕೂಲಿಕಾರರ ಕೈ ಹಿಡಿಯುವ ದೃಷ್ಠಿಯಿಂದ ಕೈಗೊಂಡ ಉದ್ಯೋಗ ಖಾತರಿ ಕೆಲಸದ ಮಾಹಿತಿ ನೀಡಲು ಕೆಲಸದ ಸ್ಥಳದಲ್ಲಿ ರೋಜಗಾರ್ ದಿವಸ್ ಆಚರಿಸಲಾಯಿತು.
ತಾಲೂಕಿನ ಪಾಳಾ ಗ್ರಾಮ ಪಂಚಾಯತ್‌ನ ಹುಣಸಿಕಟ್ಟಿ ಕೆರೆ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರೊಂದಿಗೆ ರೋಜಗಾರ್ ದಿನ ಆಚರಿಸುವ ಮೂಲಕ ನರೇಗಾದಡಿ ಸಿಗುವ ವೈಯಕ್ತಿಕ ಹಾಗೂ ಸಾಮೂದಾಯಿಕ ಕಾಮಗಾರಿಗಳ ಬಗ್ಗೆ ತಿಳಿಸಲಾಯಿತು. ಕೂಲಿಕಾರರಿಗೆ ನೀಡಲಾಗುವ ಕೂಲಿಹಣ 309ರಿಂದ 316ಕ್ಕೆ ಏರಿಕೆಯಾಗಿದೆ ಜೊತೆಗೆ ಪ್ರತಿಯೊಬ್ಬ ಕೂಲಿಕಾರರು ಈ-ಶ್ರಮ ಕಾರ್ಡ್ ಪಡೆದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದನ್ನು ತಿಳಿಸಲಾಯಿತು.
ಖಾತರಿ ಕೆಲಸದಲ್ಲಿ ಉದ್ಯೋಗ ಚೀಟಿಯುಳ್ಳ ವಯಸ್ಕರು, ವಿಕಲಚೇತನರು, ಗರ್ಭಿಣಿಯರು, ಬಾಣಂತಿಯರು ಯಾರಾದರೂ ರಿಯಾಯಿತಿಯೊಂದಿಗೆ ಪೂರ್ಣ ಪ್ರಮಾಣದ ಕೂಲಿಯೊಂದಿಗೆ ಕೆಲಸ ನಿರ್ವಹಿಸಬಹುದು ಎಂಬುದನ್ನು ಮನವರಿಕೆ ಮಾಡಲಾಯಿತು. ಈ ವೇಳೆ ಕೂಲಿಕಾರರಿಗೆ ಮತದಾನ ಜಾಗೃತಿ ಕುರಿತಂತೆ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಮತ ನೀಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬಹುದು ಜೊತೆಗೆ ಸರ್ಕಾರದ ಉತ್ತಮ ಆಡಳಿತ ವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬುದನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾಮಣಿ ಜಿ ಕೂಲಿಕಾರರಿಗೆ ತಿಳಿಸಿದರು.
ಈ ವೇಳೆ ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಗ್ರಾಮ ಪಂಚಾಯತ್ ಸಿಬ್ಬಂದಿ ಸುರೇಶ ಹುಡೇದ್, ಬಿಎಫ್‌ಟಿ ಸಂತೋಷ ಹಾಜರಿದ್ದರು.