ಕಾರವಾರ: ಕರ್ನಾಟಕ ಸಾರ್ವತ್ರಿಕ ಚುನಾವಣೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಹಳಿಯಾಳ ಮತ್ತು ಕಾರವಾರ ವೆಚ್ಚ ವೀಕ್ಷಕ ಅಂಧಾಳೇ ಭರತ ರಾಮಚಂದ್ರ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದು, ಚೆಕ್‌ಪೋಸ್ಟಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು ಮತ್ತು ಕಟ್ಟು ನಿಟ್ಟಾಗಿ ಕೆಲಸ ನಿರ್ವಹಿಸಬೇಕು. ಚೆಕ್ ಪೋಸ್ಟಗಳಲ್ಲಿ ಕಾರ್ಯ ನಿರತ ಸಿಬ್ಬಂದಿಗಳು ಪ್ರತಿಯೊಂದನ್ನು ಕುಲಂಕುಶವಾಗಿ ಪರಿಶೀಲಿಸಬೇಕು ಮಹಿಳೆಯರನ್ನು ಮಹಿಳಾ ಸಿಬ್ಬಂದಿಗಳೇ ಪರಿಶೀಲನೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾಗಿರುವುದರಿ0ದ ನೀರಿನ ಟ್ಯಾಂಕರಗಳು ಚೆಕ್ ಪೋಸ್ಟಗಳಲ್ಲಿ ಕಂಡು ಬರುತ್ತೇವೆ ಅಂತಹ ಟ್ಯಾಂಕರ್ ಗಳನ್ನು ಕೂಡ ಪರಿಶೀಲಸಬೇಕು, ಚೆಕ್ ಪೋಸ್ಟಗಳಲ್ಲಿ ಮಧ್ಯ ಇನ್ನಿತರ ಪರಿಕರಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಬೇಕು. ಒಂದು ವೇಳೆ 10 ಲಕ್ಷ ಮೇಲ್ಪಟ್ಟು ಹಣ ಸರಬರಾಜು ಆಗಿದ್ದರೆ ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷದ ನಾಯಕರು ನೀಡುವಂತಹ ಜಾಹಿರಾತುಗಳನ್ನು ಪರಿಶೀಲಿಸಿ ಅನುಮೋದಿಸಬೇಕು ನಂತರ ಜಾಹಿರಾತನ್ನು ವೆಚ್ಚಕ್ಕೆ ಪರಿಗಣಿಸಿ ಮಾಹಿತಿ ಸಲ್ಲಿಸಬೇಕು ಎಂದರು.
ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದು ಜಿಲ್ಲೆಯಲ್ಲಿ ಜ.5ರ ಪ್ರಕಾರ ಒಟ್ಟು 1176286 ಮತದಾರರು ಇದ್ದು, ಅದರಲ್ಲಿ 591101 ಪುರುಷ ಮತದಾರರು ಹಾಗೂ 585185 ಮಹಿಳಾ ಮತದಾರರು ಇರುತ್ತಾರೆ. ಹಾಗೆಯೇ ಜಿಲ್ಲೆಯಲ್ಲಿ 1435 ಮತದಾನ ಕೇಂದ್ರಗಳಿದ್ದು ಈಗಾಗಲೇ ಎಲ್ಲ ಮತದಾನ ಕೇಂದ್ರಗಳಲ್ಲು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ಕುಮಟಾ ಮತ್ತು ಶಿರಸಿ ಮತ ಕ್ಷೇತ್ರದ ಖರ್ಚು ವೀಕ್ಷಕ ಮೀನು ಸಿಂಗ್ ಬಿಷ್ಟ್, ಭಟ್ಕಳ್- ಯಲ್ಲಾಪುರ ಮತ ಕ್ಷೇತ್ರದ ಖರ್ಚು ವೀಕ್ಷಕ ಸೌಮ್ಯ ಪಾಂಡ್ಯ ಜೈನ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಈಶ್ವರಕುಮಾರ ಖಂಡೂ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ್, ಡಿಯುಡಿಸಿ ಯೋಜನಾಧಿಕಾರಿ ಸ್ಟೇಲ್ಲಾ ವರ್ಗಿಸ್ ಹಾಗೂ ಚುನಾವಣೆ ಅಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳು ಇದ್ದರು.
ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ: ಅಂಧಾಳೇ ಭರತ ರಾಮಚಂದ್ರ
