ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ನಿನ್ನೆ ರಾತ್ರಿ ಅಪರಿಚಿತರಿಂದ ಗುಂಡಿನ ದಾಳಿ ನಡೆಸಲಾಗಿದೆ. ನ್ಯಾಯವಾದಿ ಕೃಷ್ಣಮೂರ್ತಿ ಅವರು ವಿಶ್ವ ಹಿಂದೂ ಪರಿಷತ್ತಿನ ಸಭೆ ಮುಗಿಸಿ ತಮ್ಮ ಕಾರ್ ನಲ್ಲಿ ಚೆಟ್ಟಳ್ಳಿಯಿಂದ ಮಡಿಕೇರಿಗೆ ಹೊರಡುತ್ತಿದ್ದರು. ಈ ವೇಳೆ ಅವರ ಮೇಲೆ ದಾಳಿ ನಡೆದಿದೆ. ಈ ಹೇಡಿತನದ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ದಾಳಿಯ ಹಿಂದೆ ಯಾರ ಕೈವಾಡವಿದೆ, ಈ ದಾಳಿಯಿಂದಾಗಿ ಯಾರಿಗೆ ಲಾಭವಾಗಲಿದೆ, ಈ ದೃಷ್ಟಿಯಿಂದ ಕರ್ನಾಟಕ ಪೊಲೀಸರು ತನಿಖೆ ಮಾಡಿ ಈ ಪ್ರಕರಣದ ದಾಳಿ ಕೋರರು ಹಾಗೂ ಮಾಸ್ಟರ್ ಮೈಂಡ್ ನ ಪತ್ತೆ ಹಚ್ಚಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾಯರಾದ ಮೋಹನ್ ಗೌಡ ಆಗ್ರಹಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ ಹಿಂದೂ ಆರೋಪಿಗಳ ಮುಖ್ಯ ನ್ಯಾಯವಾದಿಗಳ ಮೇಲೆ ಆಕ್ರಮಣವಾಗುವುದು ಅತ್ಯಂತ ಗಂಭೀರ ಮತ್ತು ಅನುಮಾನಾಸ್ಪದವಾಗಿದೆ. ಗೌರಿ ಲಂಕೇಶ್ ಅವರು ನಕ್ಸಲೀಯರ ಸಂಪರ್ಕದಲ್ಲಿದ್ದರು ಎಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಆಕೆಯ ಹತ್ಯೆಯ ನಂತರ ನಕ್ಸಲೀಯರೂ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ವಕೀಲರ ಮೇಲೆ ಒತ್ತಡ ಹೇರಲು ಈ ದಾಳಿ ನಡೆದಿದೆಯೇ ಎಂಬ ಶಂಕೆ ಮೂಡುತ್ತದೆ. ದಾಳಿಯಲ್ಲಿ ನ್ಯಾಯವಾದಿ ಕೃಷ್ಣಮೂರ್ತಿ ಇವರು ಬದುಕುಳಿದಿದ್ದರೂ ಅವರ ಮೇಲೆ ಮತ್ತೊಮ್ಮೆ ದಾಳಿ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಅವರಿಗೆ ಸಶಸ್ತ್ರ ಪೊಲೀಸ್ ರಕ್ಷಣೆಯ ಅಗತ್ಯವಿದೆ. ಈ ಹೇಡಿತನದ ದಾಳಿಯ ಹಿಂದೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‍ಐ) ದಂತಹ ಕಟ್ಟರ್ ವಾದಿ ಜಿಹಾದಿ ಸಂಘಟನೆ ಅಥವಾ ಗೌರಿ ಲಂಕೇಶ್ ಅವರನ್ನು ಬೆಂಬಲಿಸುವ ಅರ್ಬನ್ ನಕ್ಸಲಿಸ್ಟ್ ಗಳು ಇದ್ದಾರೆಯೇ ಎಂಬುದನ್ನು ತನಿಖೆ ಮಾಡುವುದು ಅನಿವಾರ್ಯವಾಗಿದೆ ಎಂದು ಮೋಹನ ಗೌಡ ಹೇಳಿದರು.
ನ್ಯಾಯವಾದಿ ಕೃಷ್ಣಮೂರ್ತಿ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಅವರು ಹಿಂದುತ್ವದ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ. ಆದ್ದರಿಂದ ಈ ಕಾರಣದಿಂದಲೂ ಅವರ ಮೇಲೆ ಹಲ್ಲೆ ನಡೆದಿರುವ ಸಾಧ್ಯತೆ ಹೆಚ್ಚಿದೆ. ಈ ದಾಳಿ ಹಿಂದುತ್ವದ ಮೇಲಿನ ದಾಳಿಯಾಗಿದೆ. ಈ ಸಂಘಟಿತ ಅಪರಾಧವನ್ನು ಭೇದಿಸಿ ಇದರ ಹಿಂದಿರುವ ‘ಮಾಸ್ಟರ್ ಮೈಂಡ್’ನ ಪತ್ತೆ ಮಾಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಅವರಿಗೂ ಈ ಮೇಲಿನ ಬೇಡಿಕೆಯನ್ನು ಸಲ್ಲಿಸುತ್ತೇವೆ. ಕರ್ನಾಟಕದಲ್ಲಿ ಈ ಹಿಂದೆಯೂ ಹಿಂದೂಪರ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ, ಅನೇಕರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುತ್ತಿರುವ ಈ ದಾಳಿಕೋರರ ವಿರುದ್ಧ ಕಠಿಣ ಕ್ರಮಕ್ಕೂ ನಾವು ಒತ್ತಾಯಿಸುತ್ತೇವೆ. ಈ ಹಿಂದೆಯೂ ನ್ಯಾಯವಾದಿ ಕೃಷ್ಣಮೂರ್ತಿ ಅವರಿಗೆ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಭಯೋತ್ಪಾದಕ ಸಂಘಟನೆಯು ಜೀವ ಬೆದರಿಕೆ ಹಾಕಿತ್ತು.