ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬುದಕ್ಕೆ ಅನುಗುಣವಾಗಿ ಬೈಂದೂರು ವಿಧಾನಸಭೆ ಕ್ಷೇತ್ರಕ್ಕೆ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಕಾಲಿಗೆ ಚಪ್ಪಲಿಯನ್ನೇ ಧರಿಸದ ಹಾಗೂ ಅತ್ಯಂತ ಸರಳ ವ್ಯಕ್ತಿಗೆ ಈ ಅವಕಾಶ ಒಲಿದುಬಂದಿದೆ.
ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ಜನಿಸಿದ್ದು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉಪ್ಪುಂದದ ಬಳಿಯ ಗಂಟಿಹೊಳೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಉಪ್ಪುಂದದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗೆ ಹೋಗಲು ಆರಂಭಿಸಿದರು. ನಂತರ ಉನ್ನತ ವ್ಯಾಸಂಗಕ್ಕೆ ಮಂಗಳೂರಿಗೆ ಆಗಮಿಸಿದಾಗ ಆರ್‌ಎಸ್‌ಎಸ್‌ನೊಂದಿಗಿನ ಒಡನಾಟ ಮತ್ತಷ್ಟು ಗಾಢವಾಯಿತು.
ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಬಳಿಕ ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾದರು. ಪೂರ್ಣಾವಧಿ ಪ್ರಚಾರಕರು ಎಂದರೆ ತಮ್ಮಮನೆ, ಉದ್ಯಮವನ್ನು ತೊರೆದು ಆರ್‌ಎಸ್ಎಸ್ ಎಲ್ಲಿ ಹೇಳುತ್ತದೆಯೋ ಅಲ್ಲಿಗೆ ತೆರಳಿ ಸಂಘಟನೆಯ ಕಾರ್ಯವನ್ನು ನಿರ್ವಹಣೆ ಮಾಡುವುದು.
ಈ ರೀತಿ ಹತ್ತು ವರ್ಷ ಪ್ರಚಾರಕರಾಗಿದ್ದ ನಂತರ ತಮ್ಮೂರಿಗೆ ವಾಪಸಾದರು. ಆನಂತರ ಉಡುಪಿ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಹೊಣೆ ನಿರ್ವಹಿಸಿದರು. ಈ ನಡುವೆ ಉದ್ಯಮವನ್ನು ಆರಂಭಿಸಿ ನೂರು ಜನರಿಗೆ ಕೆಲಸ ಕೊಟ್ಟರು. ಉದ್ಯಮ ವಿಸ್ತರಣೆ ಸಂದರ್ಭದಲ್ಲಿ ಹಿನ್ನಡೆಯಾಗಿ ಅಲ್ಲಿಂದ ಹೊರಬಂದರು.
ನಂತರ ಸಂಪೂರ್ಣ ಸಮಾಜ ಸೇವೆಯಲ್ಲೇ ತೊಡಗಿಸಿಕೊಂಡು, ಈಶಾನ್ಯ ರಾಜ್ಯಗಳ ಮಕ್ಕಳ ಶಿಕ್ಷಣದತ್ತ ಗಮನಹರಿಸಿದರು. ಈಶಾನ್ಯ ರಾಜ್ಯಗಳಲ್ಲಿ ಮತಾಂತರದ ಹಾವಳಿ ಹೆಚ್ಚು ಜತೆಗೆ ಅಲ್ಲಿನ ಜನರನ್ನು ಭಾರತದ ಸಂಪರ್ಕದಿಂದ ದೂರಾಗಿಸುವ ಹಾಗೂ ಭಾರತದ ಸಾರ್ವಭೌಮತ್ವವನ್ನೇ ಪ್ರಶ್ನಿಸುವಂತಹವರಾಗಿ ಮಾಡಲು ಅನೇಕ ಶಕ್ತಿಗಳು ಪ್ರಯತ್ನಿಸುತ್ತಿವೆ. ಭಾರತದ ಇತರೆ ಭಾಗಗಳಲ್ಲಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿದರೆ ಉತ್ತಮ ಶಿಕ್ಷಣ ಸಿಗುವ ಜತೆಗೆ ಭಾರತೀಯತೆಯನ್ನೂ ಬೆಳೆಸಿದಂತಾಗುತ್ತದೆ ಎಂಬ ಕಾರಣಕ್ಕೆ ಮಣಿಪುರದ ಮಕ್ಕಳನ್ನು ಆರ್‌ಎಸ್ಎಸ್ ವತಿಯಿಂದ ಕರ್ನಾಟಕದ ವಿವಿಧೆಡೆ ಓದಿಸಲಾಗುತ್ತಿದೆ.
ಇದರ ಅಂಗವಾಗಿ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಇಲ್ಲಿವರೆಗೆ ತಮ್ಮದೇ ಖರ್ಚಿನಲ್ಲಿ ಅನೇಕ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಈ ರೀತಿ ಆಗಮಿಸಿದ್ದ ಹೈರೋಕ್ ಎಂಬ ಬಾಲಕ 2018ರಲ್ಲಿ ಉಪ್ಪುಂದ ಶಾಲೆಯಲ್ಲಿ ಓದಿ ಎಸ್ಎಸ್‌ಎಲ್‌ಸಿ ತೇರ್ಗಡೆಯಾಗಿದ್ದ ಅಷ್ಟೇ ಅಲ್ಲ, ಕನ್ನಡದಲ್ಲಿ 108 ಅಂಕಗಳೂ ಸೇರಿ ಒಟ್ಟು ಶೇ.83 ಅಂಕ ಗಳಿಸಿದ್ದ. ಇದು ಜಿಲ್ಲೆಯಾದ್ಯಂತ ಭಾರೀ ಸುದ್ದಿಯಾಗಿತ್ತು. ಗುರುರಾಜ್ ಅವರ ಮನೆಯಲ್ಲಿ ಇಂತಹ ಸುಮಾರು 20 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಇದೆಲ್ಲದರ ಜತೆಜತೆಗೇ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯಕರ್ತರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದರು. ಎರಡು ಕೃತಿಗಳನ್ನು ರಚಿಸಿದರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದ ಹೊಣೆಯನ್ನು ನಿಭಾಯಿಸಿದರು.
ಕ್ಷೇತ್ರದಲ್ಲಿ ಸಾಕಷ್ಟು ಪರಿಚಿತರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರಿಗೆ 2013 ಹಾಗೂ 2018ರಲ್ಲೇ ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶವಿತ್ತು, ಆದರೆ ಪಕ್ಷ ಸಂಘಟನೆಯಲ್ಲಿ ಪೂರ್ಣ ತೊಡಗಿಸಿಕೊಂಡ ನಂತರ ಟಿಕೆಟ್ ಪಡೆಯುವುದಾಗಿ ಗುರುರಾಜ್ ಅವರು ತಿಳಿಸಿದ್ದರು. ಆನಂತರದಲ್ಲಿ ಕ್ಷೇತ್ರದ ಗ್ರಾಮ ಗ್ರಾಮಗಳಲ್ಲೂ ಸಂಚರಿಸುತ್ತ ಜನರ ನಾಡಿ ಮಿಡಿತ ಅರಿತರು, ಅಲ್ಲಿನ ಯುವಕರೊಂದಿಗೆ ಬೆರೆತರು. ಎರಡೂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಶ್ರಮಿಸಿದರು.
ಅಂದಹಾಗೆ ಗುರುರಾಜ ಅವರು ಚಪ್ಪಲಿ ಧರಿಸುವುದಿಲ್ಲ. ಸಮಾಜದಲ್ಲಿ ಅನೇಕ ಕೆಟ್ಟ ವಿಚಾರಗಳಿವೆ. ಸಮಾಜದಲ್ಲಿ ಇನ್ನೂ ಅನೇಕರು ಸಂಕಷ್ಟದಲ್ಲಿದ್ದಾರೆ. ಅವುಗಳನ್ನು ನಿವಾರಿಸುತ್ತೇನೆ, ಅವೆಲ್ಲವನ್ನೂ ಮೆಟ್ಟಿ ನಿಲ್ಲುತ್ತೇನೆ ಎಂಬ ಕಾರಣಕ್ಕೆ ಚಪ್ಪಲಿಯನ್ನು ಧರಿಸುವುದಿಲ್ಲ ಬಿಳಿ ಪಂಚೆ ಹಾಗೂ ಬಿಳಿ ಅಂಗಿಯಲ್ಲೇ ಎಲ್ಲೆಡೆ ಸಂಚರಿಸುವ ಗುರುರಾಜ್ ಅವರು ಇದೀಗ ಕ್ಷೇತ್ರದಾದ್ಯಂತ ‘ಗುರುವಣ್ಣ’ ಎಂದೇ ಪರಿಚಿತರು.
ಹಾಲಿ ಶಾಸಕರಾಗಿರುವ ಸುಕುಮಾರ ಶೆಟ್ಟಿ ಅವರಂತೆಯೇ ಬಂಟ ಸಮುದಾಯಕ್ಕೆ ಸೇರಿರುವುದರಿಂದ, ಗುರುರಾಜ್ ಅವರ ಆಯ್ಕೆಯು ಬಿಜೆಪಿಯ ಸೋಷಿಯಲ್ ಇಂಜಿನಿಯರಿಂಗ್ ಸೂತ್ರಕ್ಕೂ ಅನುಗುಣವಾಗಿದೆ. ಅತ್ಯಂತ ಸರಳ, ನಿಸ್ಪೃಹ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ಈ ಬಾರಿ ಅಚ್ಚರಿಯ ಆಯ್ಕೆಯನ್ನು ಬಿಜೆಪಿ ಪ್ರಕಟಿಸಿದೆ.