ಅಂಕೋಲಾ: ಗೇರು ಹಣ್ಣಿಗೆ ಬೀಜಗಳಿರುವುದು ಸಾಮಾನ್ಯ ಸಂಗತಿ. ಆದರೆ ಇಲ್ಲಿ ಹಲಸಿನ ಹಣ್ಣು ಗೇರು ಹಣ್ಣಿನಂತೆ ಬೆಳೆದಿರುವುದು ಸೃಷ್ಠಿಯ ವೈಚಿತ್ರ್ಯಕ್ಕೆ ಇನ್ನೊಂದು ಉದಾಹರಣೆಯಾಗಿದೆ.
ಅಂಕೋಲಾ ಪಟ್ಟಣದ ಪಿ.ಎಂ.ಹೈಸ್ಕೂಲ್ ಬಳಿಯ ಎಂ.ಎಸ್.ಬoಡೀಕಟ್ಟೆ ಮನೆಯ ತೋಟದಲ್ಲಿ ಬೆಳೆದ ಹಲಸಿನ ಮರವೊಂದರಲ್ಲಿ ಗೇರು ಆಕಾರದ ಹಲಸಿನ ಕಾಯಿ ಬೆಳೆಯುತ್ತಿರುವುದು ಕಂಡುಬoದಿದೆ. ಸರಿ ಸುಮಾರು 70 ಅಧಿಕ ವರ್ಷಗಳಿಂದಲೂ ಇರುವ ಹಲಸಿನ ಮರ ಇದಾಗಿದ್ದು, ಇದೇ ಮೊದಲ ಬಾರಿಗೆ ಗೇರು ಕಾಯಿಯ ಆಕಾರದಲ್ಲಿ ಹಲಸಿನ ಕಾಯಿ ಬೆಳೆಯುತ್ತಿದೆ.
ಹಳೆಯದಾದ ಈ ಮರದಲ್ಲಿ ಸುಮಾರು 50ಕ್ಕೂ ಹೆಚ್ಚು ಹಲಸಿನ ಕಾಯಿಗಳಿದ್ದು, ಅವು ಸಾಮಾನ್ಯ ಹಲಸಿನ ಕಾಯಿಯಂತೆ ಕಾಣುತ್ತಿವೆ. ಆದರೆ 10 ಅಡಿ ಎತ್ತರದಲ್ಲಿ ಬೆಳೆಯುತ್ತಿರುವ ನಾಲೈದು ಹಲಸಿನ ಕಾಯಿಗಳು ಗೇರು ಫಲದಂತೆ ಕಂಡು ಬರುತ್ತಿವೆ. ಹಲಸಿನ ಕಾಯಿಯ ತಳಭಾಗದಲ್ಲಿ ಗೇರು ಬೀಜದಾಕೃತಿಯಂತೆ ಬೆಳೆಯುತ್ತಿವೆ. ಆದರೆ ಇದು ಗೇರು ಫಲಕ್ಕಿಂತ ದೊಡ್ಡದಾಗಿಯೇ ಕಂಡು ಬರುತ್ತಿವೆ. ಇದು ಪ್ರಕೃತಿಯ ಅಚ್ಚರಿ ಎನ್ನುವಂತೆ ಜನ ಕೌತುಕದಿಂದ ನೋಡುತ್ತಿದ್ದಾರೆ.