ಭಟ್ಕಳ: ಭಾರತೀಯ ಸಂವಿಧಾನ ಈ ದೇಶದ ಪ್ರಜೆಗೆ ನೀಡಿರುವ ಪರಮಾಧಿಕಾರವನ್ನು ಶ್ರದ್ಧೆಯಿಂದ ಪಾಲಿಸಿ, ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಆದ್ಯತೆ ನೀಡಬೇಕೆಂದು ಚುನಾವಣಾ ಆಯೋಗದಿಂದ ಭಟ್ಕಳಕ್ಕೆ ನೇಮಕವಾದ ಜನಜಾಗೃತಿ ಕಾರ್ಯಕ್ರಮಗಳ ರಾಯಭಾರಿ ಶಂಭು ಹೆಗಡೆ (ಮಾನಸುತ) ಕರೆ ನೀಡಿದರು.
ಅವರು ಬೇಂಗ್ರೆ ಗ್ರಾಮ ಪಂಚಾಯತದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಜನಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿ, ತಮ್ಮ ತೋರು ಬೆರಳಿನ ಮೂಲಕ ಗುಂಡಿ ಒತ್ತಿ ತಮಗಿಷ್ಟದ ಆಡಳಿತ ಪಡೆಯುವ ಸುಂದರ ವ್ಯವಸ್ಥೆಯಿರುವ ಈ ದೇಶದಲ್ಲಿ ಮತದಾನದ ಪ್ರಮಾಣ ಕುಸಿಯುತ್ತಿರುವುದು ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಚುನಾವಣೆಯನ್ನು ಹಬ್ಬದಂತೆ ಪರಿಗಣಿಸಿ ಎಲ್ಲರೂ ತಪ್ಪದೇ ಮತದಾನ ಮಾಡಲು ಕರೆ ನೀಡಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಚಿಕ್ಕನ್ಮನೆಯವರು ಮಾತನಾಡಿ, ಮತದಾರ ಮತದಾನದಲ್ಲಿ ಪಾಲ್ಗೊಳ್ಳಲು ಚುನಾವಣಾ ಆಯೋಗ ಪರಿಣಾಮಕಾರಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಬಾರಿ ವಯೋವೃದ್ಧರಿಗಾಗಿ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿರುವುದು ಶ್ಲಾಘನೀಯ ಕ್ರಮ. ಅಲ್ಲದೇ ನ್ಯಾಯಸಮ್ಮತ ಮತದಾನವಾಗಲು ಅನೇಕ ಆ್ಯಪ್‌ಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷದವರಿಗೆ ಅನುಕೂಲ ಮಾಡಿರುವುದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ಪಂ.ಅ.ಅಧಿಕಾರಿ ಉದಯ ಬೋರಕರ್, ಲೆಕ್ಕ ಸಹಾಯಕ ಶಂಕರ ದೇವಾಡಿಗ, ಗ್ರಾಮ ಪಂಚಾಯತ, ಅಂಗನವಾಡಿ, ಸ್ವ- ಸಹಾಯ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ಎನ್‌ಆರ್‌ಎಲ್‌ಎಂ ತಾಲೂಕು ಸಂಯೋಜಕ ವೆಂಕಟೇಶ ದೇವಾಡಿಗ, ನರೇಗಾ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.