ದಾಂಡೇಲಿ: ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ವಿಜಯಾ ಮಾನೆಯವರು ಶುಕ್ರವಾರ ಬೆಳಿಗ್ಗೆ ಟೌನಶಿಪ್ ನಲ್ಲಿರುವ ಅವರ ಸ್ವಗೃಹದಲ್ಲಿ ವಿಧಿವಶರಾದರು. ಮೃತರಿಗೆ 71 ವರ್ಷ ವಯಸ್ಸಾಗಿತ್ತು.
ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಿಜಯಾ ಮಾನೆಯವರು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದರು. ನಗರದ ವಿವಿಧ ಸಂಘ, ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಮೃತರು ಓರ್ವ ಪುತ್ರ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸಂಜೆ 4 ಗಂಟೆಗೆ ನೆರವೇರಿತು.
ಮೃತರ ನಿಧನಕ್ಕೆ ಶಾಸಕರಾದ ಆರ್.ವಿ.ದೇಶಪಾಂಡೆಯವರು ಸೇರಿದಂತೆ ಗಣ್ಯರನೇಕರು ಕಂಬನಿ ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ. ಮೃತರ ಮನೆಗೆ ಪ್ರಸಾದ್ ದೇಶಪಾಂಡೆಯವರು ತೆರಳಿ, ಅಂತಿಮ ದರ್ಶನವನ್ನು ಪಡೆದು, ಮೃತರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.