ಕುಮಟಾ: ತಾಲೂಕಿನ ಬಾಡ ಗ್ರಾಮ ದೇವತೆ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ಮಹಾರಥೋತ್ಸವ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿ0ದ ಸಂಪನ್ನಗೊ0ಡಿತು.
ಬೆಳಗ್ಗೆಯಿ0ದಲೇ ದೇವಸ್ಥಾನಕ್ಕೆ ತೆರಳಿದ ಭಕ್ತರು ದೇವಿಗೆ ಹಣ್ಣು-ಕಾಯಿ ಪೂಜಾ ಸೇವೆ ಸಲ್ಲಿಸಿ, ಮಹಿಳೆಯರು ಅರಿಶಿಣ ಕುಂಕುಮ ಸೇವೆ ಗೈದರು. ಬಳಿಕ ಭಕ್ತರು ವಿವಿಧ ದೈವಿ ಕೈಂಕರ್ಯಗಳನ್ನು ನೆರವೇರಿಸಿದರು. ಒಂದು ವಾರದ ಹಿಂದೆಯೇ ಜಾತ್ರೆಯ ಸಾಂಪ್ರದಾಯಿಕ ಆಚರಣೆಗಳು ಆರಂಭವಾಗಿದ್ದು, ದೇವಿ ಹಾಗೂ ದೇವಿಯ ಪರಿವಾರ ದೇವರುಗಳ ಪಲ್ಲಕಿ ಉತ್ಸವ ಗ್ರಾಮಾದ್ಯಂತ ಸಂಚರಿಸಿ, ಭಕ್ತರಿಂದ ವಿವಿಧ ಪೂಜಾ ಸೇವೆ ಸ್ವೀಕರಿಸಿತು.
ಜಾತ್ರೆಯ ದಿನದಂದು ಸಾಯಂಕಾಲದ ಹೊತ್ತಿಗೆ ದೇವಿಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯ ಮೇಲೆ ತಂದು, ರಥದಲ್ಲಿ ಕೂರಿಸಿ, ಮಹಾ ರಥಾರೋಹಣ ನೆರವೇರಿಸಲಾಯಿತು. ಸಹಸ್ರಾರು ಭಕ್ತರು ದೇವಿಯ ನಾಮಸ್ಮರಣೆ ಮಾಡುತ್ತ ರಾಥಾರೋಹಣ ನೆರವೇರಿಸಿದರು. ಭಕ್ತರು ರಥಕ್ಕೆ ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ದೇವಸ್ಥಾನದ ಆವರಣ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಜಾತ್ರೆ ಪೇಟೆ ಎಲ್ಲರ ಗಮನ ಸೆಳೆಯಿತು.
ಸಿಹಿ ತಿಂಡಿ-ತಿನಿಸುಗಳ ಮಳಿಗೆ ಸೇರಿದಂತೆ ಆಟ ಸಾಮಗ್ರಿ ಮತ್ತು ಮಹಿಳೆಯರ ಶೃಂಗಾರಕ ವಸ್ತುಗಳ ಅಂಗಡಿಗಳು ಸಾರ್ವಜನಿಕರನ್ನು ಆಕರ್ಷಿಸಿದ್ದವು. ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಖುಷಿಪಡುವ ಮೂಲಕ ಬಾಡ ಜಾತ್ರೆಯನ್ನು ಯಶಸ್ವಿಗೊಳಿಸಿದರು.