Slide
Slide
Slide
previous arrow
next arrow

ಮೂಲಸೌಕರ್ಯ ಒದಗಿಸಲು ಬಿಜೆಪಿ ವಿಫಲ: ರವಿಚಂದ್ರ ನಾಯ್ಕ

300x250 AD

ಯಲ್ಲಾಪುರ: ಪಟ್ಟಣ ಪಂಚಾಯಿತಿಯ ಬಿಜೆಪಿ ಆಡಳಿತ ಪಟ್ಟಣದಲ್ಲಿ ನೀರು, ಸ್ವಚ್ಛತೆ, ಹಂದಿ ಮಂಗ ನಾಯಿಗಳ ನಿಯಂತ್ರಣದಂತಹ ಮೂಲಭೂತ ಸೌಕರ್ಯ ಒದಗಿಸಲು ವಿಫಲವಾಗಿದೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರವಿಚಂದ್ರ ನಾಯ್ಕ ಹೇಳಿದರು.

ಅವರು ಗುರುವಾರ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಗಣಪತಿಗಲ್ಲಿ ಹಾಗೂ ಶಾರದಾಗಲ್ಲಿಯಲ್ಲಿ ಶುದ್ಧ ಕುಡಿಯುವ ನೀರಿನ ಅಭಾವವಿದೆ, ಅಲ್ಲಿಯ ಜನ ಕಬ್ಬಿಣದ ತುಕ್ಕು ಮಿಶ್ರಿತ ಕೊಳವೆ ಬಾವಿ ನೀರನ್ನು ಕುಡಿಯುತ್ತಿದ್ದಾರೆ. ಮನೆ ಬಳಕೆಯ ನೀರಿನ ಕೊರತೆ ಆ ಭಾಗದಲ್ಲಿ ಹೆಚ್ಚು ಕಂಡು ಬರುತ್ತಿದೆ. ಆ ಭಾಗದ ಜನಕ್ಕೆ ಪಟ್ಟಣ ಪಂಚಾಯಿತಿ ಪ್ರತಿನಿಧಿ ಯಾರು ಎಂಬುದೇ ತಿಳಿದಿಲ್ಲ. ಪಟ್ಟಣಕ್ಕೆ ವಾರದ 24 ಗಂಟೆ ನೀರು ಪೂರೈಕೆ ಮಾಡುತ್ತೇವೆ ಎಂದು 10 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಕನಿಷ್ಠ ದಿನ ಬಿಟ್ಟು ದಿನ ನೀರು ಬಿಡುವ ಬದಲು, ನಾಲ್ಕೈದು ದಿನಕ್ಕೊಮ್ಮೆ ನೀರು ಬರುತ್ತಿದೆ. 6.5 ಲಕ್ಷ ರೂಪಾಯಿ ವೆಚ್ಚ ಮಾಡಿ ಕಳಪೆ ಡಸ್ಟ್ ಬಿನ್ ತರಿಸಲಾಗಿದೆ. ಅವು ಅಲ್ಲಲ್ಲಿ ಬಿದ್ದುಕೊಂಡಿವೆ ಎಂದರು.
ದೇವಿ ಮೈದಾನದ ಎದುರು ಈಗಾಗಲೇ ಒಂದು ಶೌಚಾಲಯವಿದ್ದು, ಅದನ್ನು ಸರಿಯಾಗಿ ನಿರ್ವಹಿಸುವುದು ಬಿಟ್ಟು ಸಾರ್ವಜನಿಕರ ಹಣ ಪೋಲು ಮಾಡಿ ಮತ್ತೊಂದು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಜಾತ್ರೆಗೆ ಬೀದಿ ದೀಪ ಅಳವಡಿಸಲಾಗಿದ್ದು, ಅವು ಅರೆಬರೆ ಕೆಲಸ ಮಾಡುತ್ತಿವೆ. ಇನ್ನುಳಿದ ಕಡೆಗಳಲ್ಲಿ ಕಂಬಗಳು ಹಾಗೆ ಬಿದ್ದು ಕೊಂಡಿದೆ. ಗ್ರಾಮದೇವಿ ಜಾತ್ರೆ ಸಮಯದಲ್ಲಿ ಪಟ್ಟಣ ಪಂಚಾಯಿತಿಯಿAದ 6 ಲಕ್ಷ ರೂಪಾಯಿ ವೆಚ್ಚ ಮಾಡಿ ಸಂಪೂರ್ಣ ಪಟ್ಟಣ ಸ್ವಚ್ಛ ಮಾಡುತ್ತೇವೆ ಎಂದು ಹೇಳಿದ್ದರು ಆದರೆ ಇದುವರೆಗೂ ಕೂಡ ಗಟಾರಲ್ಲಿ ಹೂಳು, ಕಸ ಕಡ್ಡಿಗಳು ಹಾಗೆ ಬಿದ್ದಿವೆ. ಪಟ್ಟಣದಲ್ಲಿ ಮಂಗ, ಹಂದಿ ಹಾಗೂ ನಾಯಿಗಳ ಕಾಟ ಹೆಚ್ಚಾಗಿದ್ದು ಸಾರ್ವಜನಿಕರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯ ಪ.ಪಂ ವಿರುದ್ಧ ಆಪಾದಿಸಿದರು.
ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ನೀಡಿ ನಂತರ ಪಟ್ಟಾ ಯಾವುದೇ ಪ್ರಯೋಜನಕ್ಕೆ ಬಾರದಿರುವ ಕಾರಣಕ್ಕೆ ಕೆಲವು ಜನರ ಪಟ್ಟವನ್ನು ಮರಳಿ ಪಡೆಯಲಾಗಿದೆ. ಆದರೆ ಅವರು ನೀಡಿದ ಹಣವನ್ನು ಮರಳಿ ನೀಡಿಲ್ಲ. ಕೇವಲ ಶಾಸಕರ ಹೆಸರು ನಮೂದಿಸುವ ಕಾರಣಕ್ಕೆ ಜೋಡುಕೆರೆಯ ಮೇಲೆ ಪಟ್ಟಣ ಪಂಚಾಯತಿಯಿ0ದ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಕಮಾನು ನಿರ್ಮಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಲ್ಲಾಪುರದಲ್ಲಿ ಒಂದೇ ಒಂದು ಮನೆ ಮಂಜೂರಿಯಾಗಿಲ್ಲ, ಸಿದ್ದರಾಮಯ್ಯ ಅವಧಿಯಲ್ಲಿ ಬಂದ ಮನೆಗಳ ಫಲಾನುಭವಿಗಳಿಗೆ ಇದುವರೆಗೂ ಹಣ ನೀಡಿಲ್ಲ. ಬಿಜೆಪಿಯ ಶಾಸಕರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಜನರಿಗೆ ಸುಳ್ಳು ಹೇಳಿ ಆಶ್ವಾಸನೆ ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಅವರು ಆಪಾದಿಸಿದರು.

300x250 AD

ಅಭಿವೃದ್ಧಿಯಿಂದ ಶೂನ್ಯವಾಗಿರುವ ಬಿಜೆಪಿಯಿಂದಾಗಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿ ಎಸ್ ಪಾಟೀಲ್ ಅವರನ್ನು ಜನ ಬೆಂಬಲಿಸಿ ಮತ ನೀಡಲಿದ್ದಾರೆ. ಈಗಿನ ಭ್ರಷ್ಟ ವ್ಯವಸ್ಥೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾವೆಲ್ಲರೂ ಕಾಂಗ್ರೆಸ್ಸಿಗರು ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ತರುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಕಾಂಗ್ರೆಸ್ ಪ್ರಮುಖ ಸಯ್ಯದ ಕೇಸರಲಿ ಮಾತನಾಡಿ, ಅತಿಕ್ರಮಣದಾರರು ಸೇರಿದಂತೆ ಯಲ್ಲಾಪುರ ಪಟ್ಟಣದಲ್ಲಿ 7 ಸಾವಿರ ಮನೆಗಳಿವೆ. ಪಟ್ಟಣ ಪಂಚಾಯಿತಿಯಲ್ಲಿ ಮನೆ ಕಟ್ಟಲು ಅರ್ಜಿ ಹಾಕಿದರೆ ಮೊದಲು ಮನೆಯ ಕರ ಹಾಗೂ ನೀರಿನ ಕರವನ್ನು ತುಂಬಿಸಿಕೊAಡು ನಂತರ ಪರವಾನಿಗೆ ನೀಡಲು ಸತಾಯಿಸುತ್ತಾರೆ. ಮೂರು ನಂಬರ್ ಫಾರ್ಮ್ ಪಡೆಯಲು ಜನ ಹೆಣಗುವ ಬೇಕಾದಂತ ಸ್ಥಿತಿ ನಿರ್ಮಾಣವಾದರೆ, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಗಾಗಿ ಸ್ಥಳೀಯ ಜನ ಕಚೇರಿಗೆ ಎಡತಾಕುವುದು ಕಡಿಮೆಯಾಗಿಲ್ಲ. ಪಟ್ಟಣ ಪಂಚಾಯಿತಿ ಹಾಗೂ ತಾಲೂಕ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಇಂಥ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಸ್ಥಳೀಯ ಶಾಸಕರು ಗಮನವನ್ನೇ ಹರಿಸುತ್ತಿಲ್ಲ. ವ್ಯವಸ್ಥೆ ಬದಲಾವಣೆ ಆಗಬೇಕಾದರೆ ಶಾಸಕರ ಬದಲಾವಣೆಯಾಗಬೇಕು ಎಂದು ಹೇಳಿದರು.
ಕಿರವತ್ತಿ ಗ್ರಾಮ ಪಂಚಾಯತಿ ಸದಸ್ಯ ಬಾಬಾ ಜಾನ್ ಶೇಖ ಮಾತನಾಡಿ, ಕಿರವತ್ತಿ ಗ್ರಾಮ ಪಂಚಾಯಿತಿಯಲ್ಲಿ ಬಡವರಿಗೆ ಸರಿಯಾಗಿ ಮನೆ ಹಂಚಿಕೆಯಾಗಿಲ್ಲ, ಗ್ರಾಮ ಸಭೆಯ ಮೂಲಕಮನೆ ವಿತರಣೆಯಾಗದೇ ಸಚಿವರು ನೀಡಿದ ಪಟ್ಟಿಯ ಪ್ರಕಾರ ಮನೆ ವಿತರಣೆಯಾಗುತ್ತಿದೆ. ಈ ಕುರಿತು ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಕಿರವತ್ತಿ ಗ್ರಾಮವು ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಳೆದ 15 ದಿನಗಳಿಂದ ಕಾಡುತ್ತಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಪಿಡಿಒ ಗಮನಹರಿಸುತ್ತಿಲ್ಲ ಶಾಸಕರು ನಿರ್ಲಕ್ಷ ತಾಳಿದ್ದಾರೆ ಎಂದು ಆಪಾದಿಸಿದರು.
ಮಹಿಳಾ ಕಾಂಗ್ರೆಸ್ ತಾಲೂಕ ಅಧ್ಯಕ್ಷೆ ಪೂಜಾ ನೇತ್ರೇಕರ, ಜಿಲ್ಲಾ ಮಹಿಳಾ ಸೆಲ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸರಸ್ವತಿ ಗುನಗಾ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ರವಿ ನಾಯ್ಕ ಎಂಜೀನಿಯರ್, ಡಿಸಿಸಿ ಸದಸ್ಯ ಉಲ್ಲಾಸ್ ಶಾನಭಾಗ, ಸಾಮಾಜಿಕ ಜಾಲತಾಣ ಜಿಲ್ಲಾ ಕಾರ್ಯದರ್ಶಿ ಅನಿಲ್ ಮರಾಠಿ, ಪ್ರಶಾಂತ ಸಭಾಹಿತ, ಸಾಮಾಜಿಕ ಜಾಲತಾಣ ತಾಲೂಕ ಉಪಾಧ್ಯಕ್ಷೆ ಮುಸ್ರತ್ ಶೇಕ್, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಎಂ ಡಿ ಮುಲ್ಲಾ, ಪಟ್ಟಣ ಪಂಚಾಯತ್ ಸದಸ್ಯರಾದ ನರ್ಮದಾ ನಾಯ್ಕ, ತಾಲೂಕ ಅಲ್ಪಸಂಖ್ಯಾತ ಅಧ್ಯಕ್ಷ ಫೈರೋಜ್ ಸಯ್ಯದ್, ಎನ್ ವಿ ಹೆಬ್ಬಾರ್ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Share This
300x250 AD
300x250 AD
300x250 AD
Back to top