ಯಲ್ಲಾಪುರ: ಕ್ಷೇತ್ರ, ತಾಲೂಕು ಹಾಗೂ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಅನೇಕ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಗೊಳಿಸಿದ ಹೆಮ್ಮೆ ನನ್ನದಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ಗುರುವಾರ ತಾಲೂಕಿನ ಉಮ್ಮಚಗಿಯಲ್ಲಿ ಆಯೋಜಿಸಿದ್ದ ಬಿಜೆಪಿ ಉಮ್ಮಚಗಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ನಾನು ಶಾಸಕನಾಗಿ, ಸಚಿವನಾಗಿ ಕ್ಷೇತ್ರದ ವಿವಿಧ ಅಭಿವೃದ್ಧಿಗಳಿಗಾಗಿ ಅಪಾರ ಪ್ರಮಾಣದ ಅನುದಾನವನ್ನು ತಂದು, ಸಾರ್ವಜನಿಕರ ಅನೇಕ ವರ್ಷಗಳ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಹೆಬ್ಬಾರ ಕಿಟ್ ಒದಗಿಸಿದ್ದೇನೆ. ಇದು ನನಗೆ ಸಾರ್ಥಕ ಭಾವ ಉಂಟುಮಾಡಿದೆ. ನಾನು ಮಾಡಿದ ಎಲ್ಲ ಜನಪರ ಕಾರ್ಯಗಳಿಗೂ ನಮ್ಮ ಪಕ್ಷದ ಕಾರ್ಯಕರ್ತರ ಪ್ರಾಮಾಣಿಕ ಬೆಂಬಲವೇ ಕಾರಣವಾಗಿದೆ ಎಂದ ಅವರು ನನ್ನ ಅಭಿವೃದ್ಧಿಪರ ನಿಲುವನ್ನು ಗಮನಿಸಿದ ಮತದಾರರು ಈ ಬಾರಿಯೂ ನನ್ನನ್ನು ವಿಜಯಶಾಲಿಯನ್ನಾಗಿ ಮಾಡುವರೆಂಬ ಖಚಿತ ಆತ್ಮವಿಶ್ವಾಸವಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಲಾಧ್ಯಕ್ಷ ಜಿ.ಎನ್.ಗಾಂವ್ಕರ್ ಮಾತನಾಡಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಬ್ಬಾರರು ಮಾಡಿದ ಅಪರಿಮಿತ ಬಡವರ ಸೇವಾಕಾರ್ಯ, ಕೊರೋನಾ ಕಿಟ್ ವಿತರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ಮತದಾರರು ಮುಂದಿನ ಚುನಾವಣೆಯಲ್ಲಿ ಪುನಃ ಹೆಬ್ಬಾರರನ್ನು ಗೆಲ್ಲಿಸಲೇಬೇಕಿದೆ ಎಂದರು.
ಪ್ರಮುಖರಾದ ಎಂ.ಜಿ.ಭಟ್ಟ ಸಂಕದಗು0ಡಿ, ಕುಪ್ಪಯ್ಯ ಶೇರುಗಾರ್ ಮಾತನಾಡಿದರು. ವಿವಿಧ ಬೂತ್ ಅಧ್ಯಕ್ಷರಾದ ಮಣಿಕಂಠ ದೇವಡಿಗ, ರಾಮಕೃಷ್ಣ ಹೆಗಡೆ, ವಾಸು ಬೋವಿ, ವೆಂಕಟೇಶ ಪಟಗಾರ, ಮಂಜುನಾಥ ಹೆಗಡೆ ಪ್ರಮುಖರಾದ ರಾಧಾ ಹೆಗಡೆ ಬೆಳಗುಂದ್ಲಿ, ಗ್ರಾ.ಪಂ ಅಧ್ಯಕ್ಷೆ ರೂಪಾ ಪೂಜಾರಿ, ಉಪಾಧ್ಯಕ್ಷ ಶಿವರಾಯ ಪೂಜಾರಿ, ಸದಸ್ಯರಾದ ತಿಮ್ಮವ್ವ ಬಸಾಪುರ, ಲಲಿತಾ ವಾಲೀಕಾರ್, ಗಂಗಾ ಹೆಗಡೆ, ಸರಸ್ವತೀ ಪಟಗಾರ, ಗ.ರಾ.ಭಟ್ಟ, ಖೈತಾನ್ ಡಿಸೋಜಾ, ಅಶೋಕ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಪಾದ ಹೆಗಡೆ ಸಂಕದಗುoಡಿ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.