ದಾಂಡೇಲಿ: ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಪುಟ್ಬಾಲ್ ನಂತಹ ಕ್ರೀಡೆಗಳೆ ಹೆಚ್ಚಾಗಿ ವಿಜೃಂಭಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ಚದುರಂಗದoತಹ ಮೈಂಡ್ ಗೇಮ ಆಯೋಜನೆ ಮಾಡಿರುವ ಡಿಡಿಎಲ್ ತಂಡ ಮತ್ತು ಸೇವಾ ಸಂಕಲ್ಪ ತಂಡಗಳು ಸ್ಥಳಿಯ ಕ್ರೀಡಾಕ್ಷೇತ್ರಕ್ಕೆ ಹೊಸ ಆಯಾಮ ನೀಡಿದೆ ಎಂದು ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಡಿಡಿಎಲ್ ತಂಡ ಮತ್ತು ಸೇವಾ ಸಂಕಲ್ಪ ತಂಡಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಚದುರಂಗ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ಎನ್ ವಾಸರೆ ಮಾತನಾಡುತ್ತ ಚದುರಂಗ ಸ್ಪರ್ಧೆ ಆಯೋಜನೆ ಹೆಚ್ಚಿನ ಸಮಯ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಈ ಆಟದತ್ತ ಯಾರು ಹೆಚ್ಚಾಗಿ ಗಮನ ಕೊಡುವುದಿಲ್ಲ. ಆದರೆ ಎರಡು ಸಂಸ್ಥೆಗಳು ಸೇರಿ ಚದುಂರಗ ಸ್ಪರ್ಧೆ ಆಯೋಜನೆ ಮಾಡಿರುವುದು ಸಂತಸ ತಂದಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನ್ಯಾಯವಾದಿ ಅಫ್ರೀನ್ ಕಿತ್ತೂರ ಮಾತನಾಡಿ ಇಂದಿನ ಯುವ ಜನಾಂಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತಿಯಾದ ಮಾನಸಿಕ ಒತ್ತಡ ಅನುಭವಿಸುತ್ತಿದೆ. ಆದರೆ ಚೆಸ್ ಆಟ ನಮ್ಮಲ್ಲಿ ಏಕಾಗ್ರತೆ ಮೂಡಿಸುವುದರ ಜೊತೆಗೆ ಕ್ರೀಯಾಶಿಲತೆ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಇದೇ ಕ್ರೀಯಾಶಿಲತೆಯನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು. ಇನ್ನೋರ್ವ ಮುಖ್ಯ ಅತಿಥಿ ಹಳಿಯಾಳದ ವಕೀಲ ಹಾಗೂ ಕರಾಟೆ ತರಬೇತುದಾರ ಮಂಜುನಾಥ ಮಾದರ ಅವರು ಮಾತನಾಡಿ ದಾಂಡೇಲಿ, ಹಳಿಯಾಳ, ಜೋಯಿಡಾ ತಾಲಕು ಮಟ್ಟದ ಚೆಸ್ ಸ್ಪರ್ಧೆ ಆಯೋಜನೆ ಮಾಡಿರುವ ಎರಡು ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಜೊತೆಗೆ ರಾಜ್ಯ ಮಟ್ಟದ ಸ್ಪರ್ಧೆ ಆಯೋಜನೆ ಮಾಡು ಶಕ್ತಿ ಬರಲಿ ಎಂದರು. ದಾಂಡೇಲಿ ಪ್ರಿಮಿಯರ್ ಲೀಗ್ ಮುಖ್ಯಸ್ಥ ಅನೀಲ ಪಾಟ್ನೇಕರ್ ಚೆಸ್ ಸ್ಪರ್ಧೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಡಿಡಿಎಲ್ ಮುಖ್ಯಸ್ಥ ರಾಜೇಶ ತಳೇಕರ ಪ್ರಾಸ್ತಾವಿಸಿ ಇದೆ ವರ್ಷದ ಡಿಸೆಂಬರ್ ತಿಂಗಳಲ್ಲಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ಆಯೋಜನೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಸೇವಾ ಸಂಕಲ್ಪ ತಂಡದ ಅಧ್ಯಕ್ಷ ಸುಧೀರ ಶೆಟ್ಟಿ ಸ್ವಾಗತಿಸಿದರು, ಸಾಕ್ಷಿ ಸಾಮಂತ ನಿರೂಪಿಸಿ ವಂದಿಸಿದರು.