ಶಿರಸಿ: ಕೇವಲ ಹನ್ನೆರಡು ದಿನಗಳ ಹಿಂದೆ ತಾಲೂಕಿನ ಪಶ್ಚಿಮ ಭಾಗದ ದೊಡ್ಡಕೆರೆಯ ಅಭಿವೃದ್ಧಿಗೆ ಭೂಮಿ ಪೂಜೆ ನಡೆಸಿ ಕೈ ಹಾಕಿದ್ದ ಜೀವ ಜಲ ಕಾರ್ಯಪಡೆ, ಕೆರೆಯೊಳಗೇ ರಸ್ತೆ ಮಾಡಿಕೊಂಡು ಹೂಳೆತ್ತುತ್ತಿದೆ. ಕೆರೆಯ ಅಭಿವೃದ್ಧಿಯನ್ನು ಯುದ್ಧೋಪಾದಿಯಲ್ಲಿ ನಡೆಸುತ್ತಿದೆ.
ಶಿರಸಿಯ ಆನೆಹೊಂಡ, ಶಂಕರ ಹೊಂಡ ಸೇರಿದಂತೆ ಹಲವು ಪ್ರಮುಖ ಕೆರೆ ಅಭಿವೃದ್ಧಿ ಮಾಡಿದ್ದ ಕಾರ್ಯಪಡೆ ಎರಡು ಎಕರೆಗೂ ಅಧಿಕ ವಿಸ್ತೀರ್ಣದ ಕೆರೆಯ ಅಭಿವೃದ್ದಿಗೆ ಟೊಂಕ ಕಟ್ಟಿಕೊಂಡಿದೆ. ತಾಲೂಕಿನ ಯಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಸುಳ್ಳಿಯ ಕೊಪ್ಪದಗದ್ದೆ ಕೆರೆ ಅಭಿವೃದ್ದಿಗೆ ಗ್ರಾಮಸ್ಥರ ಮನವಿಯ ಮೇರೆಗೆ ಜೀವ ಜಲ ಕಾರ್ಯಪಡೆ ಕಾಮಗಾರಿ ನಡೆಸಲು ಯೋಜಿಸಿತು. ಕಳೆದ ವರ್ಷವೇ ಕೆರೆಯ ತಳ ಭಾಗದ ನೀರು ಹರಿದು ಹೋಗಲು ಕೋಡಿ ಒಡೆದು ಕೊಡಲಾಗಿತ್ತು. ಸ್ವತಃ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರ ಮಾರ್ಗದರ್ಶನ, ನೇತೃತ್ವದಲ್ಲಿ ಕೆರೆಯ ಅಭಿವೃದ್ದಿಗೆ ಕಂಕಣ ಕಟ್ಟಲಾಯಿತು.
ಕಳೆದ ಆರೇಳು ದಶಕಗಳ ಗ್ರಾಮಸ್ಥರ ಕನಸು ಜೀವ ಜಲ ಯೋಗಿ ಶ್ರೀನಿವಾಸ ಹೆಬ್ಬಾರ್ ಅವರ ಮೂಲಕ ಇಲ್ಲಿ ಈಡೇರುತ್ತಿದೆ. ಕನಸು ನನಸಾಗುತ್ತಿದೆ. ಕೆರೆಯ ಆಕಾರವಿದ್ದರೂ ಜಲ ಸಂಗ್ರಹಣೆಗೆ ಸ್ಥಳವೇ ಇರದ ಕೆರೆಗೇ ಒಂದು ಆಕಾರ ಬರುತ್ತಿದೆ ಎನ್ನುತ್ತಾರೆ ಸ್ಥಳೀಯ ಕೆರೆ ಅಭಿವೃದ್ದಿ ಸಂಘದ ಪ್ರಮುಖ ಗಿರೀಶ ಭಟ್ಟ.
ಕೆರೆ ಅಭಿವೃದ್ದಿಗೆ ಶಿಲಾನ್ಯಾಸ ಏನೋ ನಡೆಯಿತು. ಆದರೆ ಜೆಸಿಬಿ, ಹಿಟಾಚಿ, ಟ್ರಕ್ ಬಂದಾಗ ವಾಹನ ಕೆರೆಯಲ್ಲಿ ಇಳಿಯದ ಸ್ಥಿತಿ ನಿರ್ಮಾಣ ಆಗಿತ್ತು. ಇದಕ್ಕಾಗಿ ಹೆಬ್ಬಾರರು ಒಂದು ಉಪಾಯ ಮಾಡಿದರು. ಹಣ, ಶ್ರಮ ಅಧಿಕ ಆದರೂ ಮಾಡಿದ ಕೆಲಸ ಶಾಶ್ವತವಾಗಲು ಚಿಂತಿಸಿದರು. ಅದಕ್ಕಾಗಿ ಕೆರೆಯ ನಡುವೆ ಜೆಸಿಬಿ, ಹಿಟಾಚಿ, ಟಿಪ್ಪರ್ ತೆರಳಲು ಸರಿಯಾದ ರಸ್ತೆ ಮಾಡಿದರು. ನಾಲ್ಕು ದಿನಗಳ ಕಾಲ ಸತತ ನಾಲ್ಕು ಪ್ರತ್ಯೇಕ ರಸ್ತೆ ಮಾಡಿಸಿದರು. ಹೊರಗಡೆಯ ಒಳ್ಳೆಯ ಮಣ್ಣು ತರಿಸಿ ಹಾಕಿಸಿ ಕೆರೆಯೊಳಗೇ ನಾಲ್ಕು ರಸ್ತೆ ಆದಾಗ ಟಿಪ್ಪರ್, ಜೆಸಿಬಿ ವಾಹನಗಳು ಸರಾಗವಾಗಿ ಕೆರೆಯ ನಡುವೆ ಹೋದವು.
ರಸ್ತೆ ಆಗುತ್ತಿದ್ದಂತೇ ಈಗ ಒಂದು ಪಾರ್ಶ್ವದಿಂದ ಕೆರೆಯ ಏರಿ ಬಲ ಗೊಳಿಸಿ ಇನ್ನೊಂದು ಕಡೆ ಹೂಳೆತ್ತುವ ಕಾರ್ಯ ಆರಂಭವಾಗಿದೆ. ತುಂಬಿದ ಕೆರೆಯ ಹೂಳಿನ ಜೊತೆ ತುಂಬಿದ ಮಣ್ಣನ್ನೂ ಎತ್ತುತ್ತಿದ್ದಾರೆ. ಕಾರ್ಯಪಡೆಗೆ ಕೆರೆಯ ಜೌಗಿನ ಕಾರಣದಿಂದ ಡಬಲ್ ಕೆಲಸ ಆದರೂ ಇದು ಅನಿವಾರ್ಯ ಶಾಶ್ವತ ಕೆಲಸಕ್ಕೆ ಎನ್ನುತ್ತಾರೆ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್.
ಅಭಿವೃದ್ಧಿ ನೋಡಲು ಜನ: ನಿತ್ಯ ಜೆಸಿಬಿ, ಹಿಟಾಚಿ ಜೊತೆ ಮೂರು ಟಿಪ್ಪರ್ ಕೆಲಸ ಮಾಡುತ್ತಿದೆ. ದೊಡ್ಡ ಕೆರೆಯ ಅಭಿವೃದ್ದಿ ನೋಡಲು ಗ್ರಾಮಸ್ಥರು, ಸ್ಥಳೀಯರು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎನ್ನದೇ ಬರುತ್ತಿದ್ದಾರೆ. ಕೆರೆಯ ಅಭಿವೃದ್ದಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಶಿರಸಿಯ ನಿವೃತ್ತ ಉಪನ್ಯಾಸಕ ಪ್ರೋ. ಕೆ.ವಿ.ಭಟ್ ಇದೊಂದು ದಾಖಲೆಯ ಕೆಲಸ ಗ್ರೇಟ್. ಜೀವ ಜಲ ಕಾರ್ಯಪಡೆ, ಹೆಬ್ಬಾರರ ಕೆಲಸ ಅಚ್ಚರಿ ತರುತ್ತದೆ ಎಂದು ಬಣ್ಣಿಸಿದರು.
ಸ್ಥಳೀಯರು ಎತ್ತಿದ ಕೆರೆಯ ಹೂಳು ಮರಳಿ ಕೆರೆಗೆ ಬಾರದ ಸ್ಥಳ ನೋಡಿ ಹಾಕಿಸುತ್ತಿದ್ದಾರೆ. ಜಲ ರಕ್ಷಣೆಯ ಕಾರ್ಯದಲ್ಲಿ ಎಲ್ಲರೂ ಉತ್ಸುಕರಾಗಿದ್ದಾರೆ. ಜೀವ ಜಲ ಅಕ್ಷರಶಃ ಮಾದರಿಯಾದ ಹೆಜ್ಜೆ ಇಡುತ್ತಿದೆ. ಹೆಬ್ಬಾರರ ಜಲ ರಕ್ಷಣೆಯ ಪ್ರೀತಿ ಎಲ್ಲರಿಗೂ ಸದ್ದಿಲ್ಲದೇ ಪಾಠ ಮಾಡುತ್ತಿದೆ.