ಕಾರವಾರ: ಕರ್ನಾಟಕ ಗಡಿಯೊಳಗಿರುವ 865 ಹಳ್ಳಿಗಳಿಗೂ ಅನ್ವಯ ಆಗುವಂತೆ ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ಯೋಜನೆ ಜಾರಿ ಮಾಡಿ ಮಹಾರಾಷ್ಟç ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರದ ಆಕ್ಷೇಪ ಹಾಗೂ ಕೆಪಿಸಿಸಿ ಆಕ್ರೋಶವನ್ನೂ ನಿರ್ಲಕ್ಷ್ಯ ಮಾಡಿದ ‘ಮಹಾ’ ಮುಖ್ಯಮಂತ್ರಿ ಏಕನಾಥ ಶಿಂಧೆ ಈ ನಿರ್ಣಯ ಕೈಗೊಂಡಿದ್ದಾರೆ.
ಗಡಿ ತಂಟೆ ತೀರ್ಪು ಹೊರಬೀಳುವವರೆಗೂ ಎರಡೂ ರಾಜ್ಯಗಳು ಯಾವುದೇ ರೀತಿಯ ಹಸ್ತಕ್ಷೇಪ ಮಾಡಕೂಡದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಸಂಧಾನ ಸಭೆಯಲ್ಲಿ ಸೂಚಿಸಿದ್ದರು. ಕರ್ನಾಟಕ– ಮಹಾರಾಷ್ಟ್ರದ ತಲಾ ಮೂವರು ಸಚಿವರನ್ನು ಒಳಗೊಂಡ ಸಲಹಾ ಸಮಿತಿಯನ್ನೂ ರಚನೆ ಮಾಡಿದ್ದರು. ಏನೇ ನಿರ್ಣಯ ಕೈಗೊಳ್ಳುವ ಮುನ್ನ ಈ ಸಮಿತಿ ಮುಂದೆ ಇಡಬೇಕು ಎಂದೂ ಆದೇಶಿಸಿದ್ದರು. ಎಲ್ಲವನ್ನೂ ಮಹಾರಾಷ್ಟ್ರ ಸರ್ಕಾರ ಗಾಳಿಗೆ ತೂರಿದೆ.
ಉದ್ದೇಶವೇನು?: 1957ರಿಂದಲೂ ಮಹಾರಾಷ್ಟ್ರ ಗಡಿ ತಂಟೆ ತೆಗೆದಿದೆ. ಬೆಳಗಾವಿಯೂ ಸೇರಿ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ದಾವೆ ಹೂಡಿದೆ. ಕಳೆದ 18 ವರ್ಷಗಳಿಂದ ಇದು ಸುಪ್ರೀಂ ಕೋರ್ಟ್ ನಲ್ಲಿದೆ. ಇದೂವರೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಾತ್ರ ಗಡಿ ಹೋರಾಟ ನಡೆಸಿತ್ತು. ಈಗ ಇದನ್ನು ಮರಾಠಿ ಜನಸಾಮಾನ್ಯರ ಹೋರಾಟವಾಗಿ ಪರಿವರ್ತಿಸುವ ಹುನ್ನಾರ ಮಹಾರಾಷ್ಟ್ರ ಸರ್ಕಾರದ್ದು. ಗಡಿ ಜನರನ್ನು ಭಾವನಾತ್ಮಕವಾಗಿ ತಮ್ಮತ್ತ ಸೆಳೆಯಲು ಈ ಆರೋಗ್ಯ ವಿಮೆ ಜಾರಿ ಮಾಡಿದೆ ಎನ್ನುವ ತಕರಾರುಗಳೂ ಕೇಳಿಬಂದಿವೆ.
ಎಲ್ಲೆಲ್ಲಿ, ಹೇಗೆ ಅನ್ವಯ…?
ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ ಹಾಗೂ 12 ತಾಲ್ಲೂಕುಗಳಿಲ್ಲಿರುವ 865 ಹಳ್ಳಿಗಳ ಎಲ್ಲ ಭಾಷಿಗರೂ ಈ ವಿಮೆಯ ಫಲಾನುಭವಿ ಆಗಬಹುದು. ಸಣ್ಣ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಒಳಗೊಂಡು ಒಟ್ಟು 996 ಕಾಯಿಲೆಗಳಿಗೆ ವಿಮೆ ಅನ್ವಯ. ಕರ್ನಾಟಕ ಹಾಗೂ ಮಹಾರಾಷ್ಟ್ರದ ದೊಡ್ಡ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಅವಕಾಶ. ವಾರ್ಷಿಕ ಗರಿಷ್ಠ 1.50 ಲಕ್ಷದವರೆಗೆ ವಿಮೆ ಸಿಗಲಿದೆ. ಕರ್ನಾಟಕ ಸರ್ಕಾರ ನೀಡಿದ ಅಂತ್ಯೋದಯ ಪಡಿತರ ಚೀಟಿ, ಮಹಾರಾಷ್ಟ್ರ ಸರ್ಕಾರದ ಅನ್ನಪೂರ್ಣ ಪಡಿತರ ಚೀಟಿ ಅಥವಾ ವಾರ್ಷಿಕ ಆದಾಯದ ದಾಖಲೆ ನೀಡಿ ಇದನ್ನು ಬಳಸಿಕೊಳ್ಳಬಹುದು.