ಕುಮಟಾ: ತಾಲೂಕಿನ ಚಿತ್ರಗಿಯ ಪುರಾಣ ಪ್ರಸಿದ್ಧ ಶ್ರೀರಾಮಚಂದ್ರ ಮಠದಲ್ಲಿ ಶ್ರೀರಾಮ ನವಮಿ ಉತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ತಾಲೂಕಿನ ಚಿತ್ರಗಿಯ ಪುರಾಣ ಪ್ರಸಿದ್ಧ ಶ್ರೀರಾಮಚಂದ್ರ ಮಠದಲ್ಲಿ ನಡೆದ ಶ್ರೀರಾಮ ನವಮಿ ಉತ್ಸವದ ನಿಮಿತ್ತ ಭಕ್ತರು ಶ್ರೀರಾಮನಿಗೆ ವಿವಿಧ ಪೂಜಾ ಸೇವೆಗೈದರು. ಹಣ್ಣುಕಾಯಿ ಸೇವೆಯ ಜತೆಗೆ ಭಕ್ತರು ಹರಸಿಕೊಂಡ ಹರಕೆಯನ್ನು ಕೂಡ ಸಮರ್ಪಿಸಲಾಯಿತು. ಅಖಂಡ ರಾಮತಾರಕ ಭಜನೆ ಪ್ರತಿವರ್ಷದಂತೆ ಈ ವರ್ಷವೂ ಶ್ರದ್ಧಾಭಕ್ತಿಯಿಂದ ನಡೆಯಿತು.
ಅನೇಕ ಭಕ್ತರು ಭಜನೆಯಲ್ಲಿ ಪಾಲ್ಗೊಂಡು ರಾಮನಾಮ ಜಪಿಸುತ್ತ ಭಕ್ತಿಯ ಪರಾಕಾಷ್ಠೆ ಮೆರೆದರು. ಬಳಿಕ ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಅನ್ನದಾನ ಸೇವೆಯನ್ನು ಗಾಣಿಗ ಯುವ ಬಳಗದ ಗಣಪತಿ ಶೆಟ್ಟಿ ವಹಿಸಿಕೊಂಡಿದ್ದರು.
ಸಂಜೆ ಭಜನಾ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು. ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಿಸಲಾಯಿತು. ಈ ಉತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಸಮಾಜ ಬಾಂಧವರು ಹಾಗೂ ಗಾಣಿಗ ಯುವ ಬಳಗದ ಪದಾಧಿಕಾರಿಗಳು ಮತ್ತು ಭಕ್ತಾಧಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀರಾಮ ನವಮಿ ಉತ್ಸವವನ್ನು ಯಶಸ್ವಿಗೊಳಿಸಿದರು.