ಶಿರಸಿ : ಪಶ್ಚಿಮ ಘಟ್ಟದ ದೇವರಕಾಡು ಕಾನು ಅರಣ್ಯಗಳ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಬಾರದು. 2023-24 ರಲ್ಲಿ ಈ ಯೋಜನೆಗಳಿಗೆ ಅನುದಾನ ನೀಡಬೇಕು. ರಾಜ್ಯ ಉಚ್ಛನ್ಯಾಯಾಲಯದಲ್ಲಿ ಇರುವ ಭೀಮಸೇತು, ಕಟ್ಟೆಕೊಪ್ಪ, ಕುಡುಮಲ್ಲಿಗೆ, ಹಗಲತ್ತಿ, ತೋಟದಕೊಪ್ಪ ಪ್ರಕರಣಗಳು ಸೇರಿದಂತೆ ಸುಮಾರು 5000 ಎಕರೆ ಅರಣ್ಯ ಭೂಮಿ ರಕ್ಷಣೆಗೆ ಅರಣ್ಯ ಇಲಾಖೆ ವ್ಯವಸ್ಥಿತ ಪ್ರಬಲವಾದ ವಾದ ಮಂಡಿಸಬೇಕು. ಕಾರವಾರ – ಅಂಕೋಲಾ ಮಧ್ಯೆ ಖಾಲಿ ಇರುವ ಬೆಟ್ಟಗುಡ್ಡ ಪ್ರದೇಶದಲ್ಲಿ ಬೃಹತ್ ವನೀಕರಣ ಯೋಜನೆ ರೂಪಿಸಿ ಜಾರಿ ಮಾಡಲು ಕಳೆದ 2 ವರ್ಷಗಳಿಂದ ತಯಾರಿ, ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಗ್ರೀನ್‌ಬೆಲ್ಟ ಹಸಿರುಪಟ್ಟಿ ಯೋಜನೆಗೆ ಹಸಿರು ನಿಶಾನೆ ಸಿಗಬೇಕು. ನೌಕಾನೆಲೆ ಸಹಕಾರ ಪಡೆಯಬೇಕು ಎಂದು ವೃಕ್ಷಲಕ್ಷ ಆಂದೋಲನದ ಆಯೋಗ ರಾಜ್ಯ ಅರಣ್ಯ ಪರಿಸರ ಇಲಾಖೆ ಮುಖ್ಯಸ್ಥರನ್ನು ಒತ್ತಾಯಿಸಿದೆ.
ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಪ್ರಧಾನ ಕಾರ್ಯದರ್ಶಿ ಸಂಜಯ ಬಿಜ್ಜೂರ್, ಅರಣ್ಯ ಕಾನೂನು ಸೆಲ್ ಮುಖ್ಯಸ್ಥ ಬ್ರಿಜೇಶ್ ಕುಮಾರ್ ಅವರ ಜೊತೆ ವೃಕ್ಷಲಕ್ಷ ತಂಡ ಸಮಾಲೋಚನೆ ನಡೆಸಿ ದಾಖಲೆ ಸಹಿತ ಮಾಹಿತಿ ಮಂಡಿಸಿತು.
2023-24 ರಲ್ಲಿ ಕಾರವಾರ – ಅಂಕೋಲಾ ಗ್ರೀನ್‌ಬೆಲ್ಟ ಯೋಜನೆ ಸೇರಿದಂತೆ ಕಾನು – ದೇವರಕಾಡು ಯೋಜನೆ ಸೇರಿದಂತೆ ಅರಣ್ಯ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸುತ್ತೇವೆ. ನ್ಯಾಯಾಲಯಗಳಲ್ಲಿ ಇರುವ ಗಂಭೀರ ಅರಣ್ಯ ಪ್ರಕರಣಗಳ ಬಗ್ಗೆ ವಿಶೇಷ ಆದ್ಯತೆ ನೀಡುತ್ತೇವೆ ಎಂದು ಅರಣ್ಯ ಪರಿಸರ ಇಲಾಖೆ ಮುಖ್ಯಸ್ಥರು ತಿಳಿಸಿದರು. ಆಗುಂಬೆ ಬಳಿಯ ಸೂಕ್ಷ್ಮಅರಣ್ಯ ಭೂಮಿ ಕಬಳಿಕೆ ಆಗದಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಲಿದೆ ಎಂದು ಅರಣ್ಯ ಪ್ರಧಾನಕಾರ್ಯದರ್ಶಿ ತಿಳಿಸಿದರು.
ಇತ್ತೀಚೆಗೆ ವೃಕ್ಷಲಕ್ಷ ತಂಡ ಭಾರತ ಸರ್ಕಾರದ ಅರಣ್ಯ ಪರಿಸರ ಮಂತ್ರಾಲಯದ ದಕ್ಷಿಣ ಭಾರತ ಕಚೇರಿ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಅವರನ್ನು ಭೇಟಿ ಮಾಡಿ ಪಶ್ಚಿಮ ಘಟ್ಟದ ಅರಣ್ಯ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿತು. ಕೇಂದ್ರ ಅರಣ್ಯ ಅಧಿಕಾರಿಗಳ ತಂಡ ಪಶ್ಚಿಮ ಘಟ್ಟ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಮನವಿ ಮಾಡಿತು. ಈ ಕುರಿತು ನಡೆದ ಸಭೆಯಲ್ಲಿ ಅನಂತ ಹೆಗಡೆ ಅಶೀಸರ, ಡಾ.ಸುಹಾಸ್, ಅಂಜನ ಕುಮಾರ್, ಡಾ. ವಿಜಯ ಶರ್ಮಾ ಮುಂತಾದವರಿದ್ದರು. ಏಕಜಾತಿ ನೆಡುತೋಪು ನಿರ್ಮಾಣ ಕೈಬಿಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ನಿಯೋಗ ಮನವಿ ನೀಡಿದೆ.