ಕಾರವಾರ: ಬಾಲಿವುಡ್ ನಟ ಸೋನು ಸೂದ್ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರುವ ಶ್ರೀಮಂತ ಚಲನಚಿತ್ರ ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆಗೊಳ್ಳಲಿದೆ.
ಹಾಸನ್ ರಮೇಶ್ ಕಥೆ- ಚಿತ್ರಕಥೆ- ಸಂಭಾಷಣೆ- ನಿರ್ದೇಶನದ, ಅವರದ್ದೇ ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿ ನಿರ್ಮಾಣಗೊಂಡಿರುವ ಮೊದಲ ಚಿತ್ರ ಇದಾಗಿದ್ದು, ನಾದಬ್ರಹ್ಮ ಡಾ.ಹಂಸಲೇಖರವರ ಎಂಟು ಹಾಡುಗಳನ್ನು ಒಳಗೊಂಡಿದೆ. ವಿಶೇಷವೆಂದರೆ, ದಿ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಕೊನೆಯ ಗೀತೆ ಕೂಡ ಈ ಸಿನೇಮಾದಲ್ಲಿದೆ. ರೈತನ ಕುರಿತಾದ ಈ ಸಿನೇಮಾದ ಚಿತ್ರೀಕರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಿತ್ರೀಕರಣಗೊಂಡಿದ್ದು, ಅನ್ನದಾತನ ನೋವು- ನಲಿವನ್ನ ಸಾರುವ ಚಿತ್ರ ಇದಾಗಿದೆ.
ನಾಯಕಿಯಾಗಿ ಮುಂಬೈನ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಮೆನನ್ ಜೊತೆಗೆ ಕಲ್ಯಾಣ ಕರ್ನಾಟಕದ ಕ್ರಾಂತಿ ಎಂಬ ಯುವ ಪ್ರತಿಭೆ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್, ಸಾಧು ಕೋಕಿಲ, ರಮೇಶ್ ಭಟ್, ರಾಜು ತಾಳಿಕೋಟೆ ಹೀಗೆ ದೊಡ್ಡ ದೊಡ್ಡ ಹಿರಿಯ ನಟರುಗಳ ತಾರಾಗಣವೇ ಇದರಲ್ಲಿದೆ ಎಂದು ಚಿತ್ರತಂಡ ತಿಳಿಸಿದೆ.
ಸೋನು ಸೂದ್ ನಟನೆಯ ಕನ್ನಡ ಸಿನೆಮಾ ‘ಶ್ರೀಮಂತ’ ಬಿಡುಗಡೆಗೆ ಸಿದ್ಧ
