ಕಾರವಾರ: ಕಾಂಗ್ರೆಸ್ ಪಕ್ಷ ತನ್ನ 124 ಕ್ಷೇತ್ರದ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯ ಕಾರವಾರ ಕ್ಷೇತ್ರದ ಅಭ್ಯರ್ಥಿಯಾಗಿ ಸತೀಶ್ ಸೈಲ್ ಹೆಸರು ಪ್ರಕಟಿಸಿದೆ. ಇದರ ಬೆನ್ನಲ್ಲೇ ಟಿಕೇಟ್ ಪ್ರಯತ್ನಕ್ಕೆ ಇಳಿದಿದ್ದ ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಚೈತ್ರಾ ಕೊಠಾರಕರ್ ಪಕ್ಷೇತರವಾಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದ ಚೈತ್ರಾ ಕೊಠಾರಕರ್ ಕಾಂಗ್ರೆಸ್ ಟಿಕೇಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಚೈತ್ರಾ ಪತಿ ಚಂದ್ರಹಾಸ್ ಕೊಠಾರಕರ್ ಕಾರವಾರ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತವನ್ನ ಹಿಂದಿನಿಂದ ಇಟ್ಟುಕೊಂಡು ಬಂದಿದ್ದು ಕಾರವಾರ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ತಮಗೆ ಟಿಕೇಟ್ ಕೊಡುವಂತೆ ಒತ್ತಾಯ ಮಾಡಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ನಾಯಕರುಗಳ ಬಳಿ ಟಿಕೇಟ್ ಗಾಗಿ ಒತ್ತಾಯ ಮಾಡಿದ್ದು, ಕ್ಷೇತ್ರದಲ್ಲಿ ತನಗೆ ಟಿಕೇಟ್ ಸಿಗುತ್ತದೆ ಎಂದು ಓಡಾಟ ನಡೆಸಿದ್ದರು. ಮಾಜಿ ಶಾಸಕ ಸತೀಶ್ ಸೈಲ್ ಈ ಬಾರಿ ಪಕ್ಷೇತರವಾಗಿ ಕಣಕ್ಕೆ ಇಳಿಯುತ್ತಾರೆ ಎಂದು ಚೈತ್ರಾ ಕೊಠಾರಕರ್ ಟಿಕೇಟ್ ಗಾಗಿ ಲಾಬಿ ನಡೆಸಿದ್ದರು.
ಆದರೆ ಕಾಂಗ್ರೆಸ್ ಪಕ್ಷ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಶಾಸಕ ಸತೀಶ್ ಸೈಲ್ ಹೆಸರು ಘೋಷಿಸಿದೆ. ಇದರ ಬೆನ್ನಲ್ಲೇ ಟಿಕೇಟ್ ಸಿಗದ ಹಿನ್ನಲೆಯಲ್ಲಿ ಪಕ್ಷೇತರವಾಗಿ ಕಣಕ್ಕೆ ಇಳಿದು ಚುನಾವಣೆ ಎದುರಿಸಲು ಚೈತ್ರಾ ಕೊಠಾರಕರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ತನ್ನ ಬೆಂಬಲಿಗರ ಜೊತೆ ಸಭೆಯನ್ನ ಸಹ ನಡೆಸಿದ್ದಾರೆ ಎನ್ನಲಾಗಿದ್ದು ಬಹುತೇಕರು ಪಕ್ಷೇತರವಾಗಿ ಕಣಕ್ಕೆ ಇಳಿಯುವಂತೆ ಒತ್ತಡ ಹಾಕಿರುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.